

ಆಲೂರು : ದೇವಾಲಯ ನಿರ್ಮಾಣ ಮಾಡುವುದು ಸುಲಭದ ಕಾರ್ಯವಲ್ಲ. ನೂತನ ದೇವಾಲಯಗಳ ನಿರ್ಮಾಣದಿಂದ ಧಾರ್ಮಿಕ ಶ್ರದ್ಧೆ, ಭಕ್ತಿ ಮತ್ತು ಸಂಸ್ಕೃತಿಗಳ ಪುನರುತ್ಥಾನವಾಗುತ್ತದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲೂಕಿನ ಹಂಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಬಗಾಲ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ನಿರ್ಮಾಣ ಕಾರ್ಯಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ನಮ್ಮ ಪೂರ್ವಿಕರು ಆಚರಿಸಿಬೆಳೆಸಿಕೊಂಡು ಬಂದಿರುವ ಸಂಸ್ಕಾರಯುತ ಕಾರ್ಯಗಳನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಬೇಕು. 150 ವರ್ಷಗಳ ಇತಿಹಾಸವಿರುವ ಮುಜರಾಯಿಗೆ ಸೇರಿದ ಆಂಜನೇಯಸ್ವಾಮಿ ದೇವಾಲಯ ಸಂಪೂರ್ಣವಾಗಿ ಶಿಥಿಲಗೊಂಡು ದೇವಾಲಯ ಯಾವಾಗಲಾದರೂ ಬೀಳುವ ಪರಿಸ್ಥಿತಿಯಲ್ಲಿತ್ತು. ಗ್ರಾಮಸ್ಥರು ಸೇರಿ ಸುಂದರ ದೇವಾಲಯ ನಿರ್ಮಾಣ ಮಾಡಬೇಕು ಎಂದು ಚುನಾವಣೆ ಸಂದರ್ಭದಲ್ಲಿ ನನ್ನ ಗಮನಕ್ಕೆ ತಂದರು. ಗ್ರಾಮಸ್ಥರ ಜತೆ ದೇವಾಲಯಕ್ಕೆ ಹೋಗಿ ನೋಡಿದಾಗ ದೇವಸ್ಥಾನ ಬೀಳುವ ಹಂತದಲ್ಲಿದ್ದರಿಂದ ದೇವಾಲಯ ಮರು ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರಲ್ಲಿ ಚರ್ಚಿಸಿ ಇಂದು ಭೂಮಿ ಪೂಜೆ ಮಾಡಲಾಗಿದೆ. ಇಂತಹ ಕಾರ್ಯಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.
ಹಂಚೂರು ಗ್ರಾಮ ಪಂಚಾಯಿತಿ ಪಿಡಿಒ ಸವಿತಾ, ಹಂಚೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಷಣ್ಮುಖಪ್ಪ, ಮಾಜಿ ಸದಸ್ಯ ದಿನೇಶ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಅಬ್ಬನ, ನಿವೃತ್ತ ಪೊಲೀಸ್ ಪುಟ್ಟಸ್ವಾಮೀಗೌಡ, ಬಿಜೆಪಿ ಮುಖಂಡ ಯೋಗೇಶ್ ಕಡಬಗಾಲ, ಮೋಹನ್ ಗಂಗರ, ಹಂಚೂರು ಗ್ರಾಮ ಪಂಚಾಯಿತಿ ಸದಸ್ಯ ಅಪ್ಪು( ಚಂದ್ರಶೇಖರ್),ನಿವೃತ್ತ ಕಾನೂನು ಇಲಾಖೆ ಕಾಳಿಂಗಪ್ಪ,ಅರೋಗ್ಯ ಇಲಾಖೆ ನಿವೃತ್ತ ನೌಕರ ಕೆ.ಆರ್.ರಾಜು, ಎಚ್‌ಆರ್‌ಪಿ ನಿವೃತ್ತ ನೌಕರ ಮಲ್ಲಿಕಾರ್ಜುನಯ್ಯ, ಜಿಲ್ಲಾ ಪಂಚಾಯಿತಿ ನಿವೃತ್ತ ನೌಕರ ಸುರೇಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.