ಸಂಪಾದಕೀಯ | ನಿರ್ಬಂಧ ಕ್ರಮ ಅನಗತ್ಯ

ವಿಜಯವಾಣಿ
Published on

ಸರ್ಕಾರಿ ಶಾಲೆಗಳು, ಕಾಲೇಜುಗಳು, ಸಾರ್ವಜನಿಕ ಉದ್ಯಾನವನಗಳು, ಆಟದ ಮೈದಾನಗಳು, ಮುಜರಾಯಿ ದೇವಾಲಯಗಳು ಮತ್ತು ಸರ್ಕಾರದಿಂದ ನಿಯಂತ್ರಿತವಾದ ಇತರ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಚಟುವಟಿಕೆಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದು ಒತ್ತಾಯಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಆರೆಸ್ಸೆಸ್​ನ ಶತಮಾನೋತ್ಸವ ಆಚರಣೆ ಮತ್ತು ವಿಜಯದಶಮಿ ಕಾರ್ಯಕ್ರಮದ ತಯಾರಿಯ ಸಂದರ್ಭದಲ್ಲಿ ಖರ್ಗೆ ಈ ಪತ್ರ ಬರೆದಿದ್ದಾರೆ.

ಅ. 10ರಂದು ಬರೆದ ಈ ಪತ್ರದಲ್ಲಿ ಅವರು, ‘ಆರೆಸ್ಸೆಸ್​ನ ಶಾಖೆಗಳು ಮತ್ತು ಬೈಠಕ್​ಗಳು ಭಾರತೀಯ ಸಂವಿಧಾನ ಮತ್ತು ರಾಷ್ಟ್ರೀಯ ಏಕತೆಗೆ ವಿರುದ್ಧವಾದ ವಿಭಜನಕಾರಿ ಭಾವನೆಯನ್ನು ಉತ್ತೇಜಿಸುತ್ತವೆ. ಆಗಾಗ ಅನಧಿಕೃತವಾಗಿ ನಡೆಯುವ ಇವು, ಆಕ್ರಮಣಕಾರಿ ಘೊಷಣೆ ಮತ್ತು ಋಣಾತ್ಮಕ ಚಿಂತನೆ ಮೂಲಕ ಮಕ್ಕಳು ಮತ್ತು ಯುವಕರಲ್ಲಿ ದ್ವೇಷದ ಬೀಜ ಬಿತ್ತುತ್ತವೆ’ ಎಂಬರ್ಥದಲ್ಲಿ ಆರೋಪ ಮಾಡಿದ್ದಾರೆ. ‘ವಿಭಜನಾಕಾರಿ ಶಕ್ತಿಗಳು ಬಲಗೊಳ್ಳುತ್ತಿರುವಾಗ, ಜಾತ್ಯತೀತ ಮೌಲ್ಯಗಳನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ’ ಎಂದಿರುವ ಅವರು ತುರ್ತು ಪರಿಸ್ಥಿತಿ ಮತ್ತು ಗಾಂಧಿ ಹತ್ಯೆ ನಂತರದ ದಿನಗಳಲ್ಲಿ ಆರೆಸ್ಸೆಸ್ ನಿಷೇಧ ಮಾಡಿದ್ದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಆ ಪತ್ರದ ಮೇಲೆ ‘ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಿ’ ಎಂದು ಬರೆದು ಅದನ್ನು ಮುಖ್ಯ ಕಾರ್ಯದರ್ಶಿಗೆ ಕಳಿಸಿದ್ದಾರೆ. ತಮಿಳುನಾಡಿನಲ್ಲಿ ಯಾವ ರೀತಿ ಕ್ರಮವಿದೆಯೋ ಅದನ್ನು ಅನುಸರಿಸಿ ಎಂಬುದಾಗಿ ಮುಖ್ಯ ಕಾರ್ಯದರ್ಶಿಗೆ ಹೇಳಿರುವುದಾಗಿಯೂ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದರರ್ಥ, ತಮಿಳುನಾಡಿನಲ್ಲಿ ಆರೆಸ್ಸೆಸ್ ಅನ್ನು ಸಂಪೂರ್ಣ ನಿಷೇಧಿಸಿಲ್ಲವಾದರೂ ಅದರ ಚಟುವಟಿಕೆಗಳ ಮೇಲೆ ಭಾಗಶಃ ನಿರ್ಬಂಧ ವಿಧಿಸಿರುವಂತೆ ಇಲ್ಲಿಯೂ ಮಾಡಬೇಕು ಎಂಬುದೇ ಆಗಿದೆ.

ಈ ಕ್ರಮವು ಕಾಂಗ್ರೆಸ್​ನ ಕಪಟ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಇಂತಹ ಕ್ರಮಕ್ಕೆ ಮುಂದಾಗಿರುವ ನಾಯಕರು ಆರೆಸ್ಸೆಸ್​ನ 100 ವರ್ಷಗಳ ಇತಿಹಾಸದತ್ತ ಒಮ್ಮೆ ಕಣ್ಣು ಹಾಯಿಸುವುದು ಒಳಿತು. ಶಿಸ್ತು, ದೇಶಭಕ್ತಿ ಮತ್ತು ರಾಷ್ಟ್ರಸೇವೆಗೆ ಇನ್ನೊಂದು ಹೆಸರೇ ಆರೆಸ್ಸೆಸ್. ದೇಶದಲ್ಲಿ ಎಲ್ಲಿಯೇ ಪ್ರಕೃತಿ ವಿಕೋಪಗಳು, ಅವಘಡಗಳು ಸಂಭವಿಸಿದರೂ ರಕ್ಷಣೆಗೆ, ಪರಿಹಾರ ಕಾರ್ಯಕ್ಕೆ ಮೊದಲು ಧಾವಿಸುವವರು ಆರೆಸ್ಸೆಸ್​ನ ಕಾರ್ಯಕರ್ತರು. ರಾಷ್ಟ್ರೀಯ ಏಕತೆ ಮತ್ತು ಸಾಮಾಜಿಕ ಸಾಮರಸ್ಯ ಬಲಪಡಿಸುವ ಕಾರ್ಯವನ್ನು ಈ ಸಂಘಟನೆ ನಿರಂತರವಾಗಿ ಮಾಡುತ್ತ ಬಂದಿದೆ. ಶಾಖೆಗಳಲ್ಲಿ ಯುವಕರಿಗೆ, ಮಕ್ಕಳಿಗೆ ಶಾರೀರಿಕ ಸದೃಢತೆಯ ತರಬೇತಿ, ನೈತಿಕ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಕಲಿಸಲಾಗುತ್ತದೆ. ಇದರಿಂದ ದೇಶಕ್ಕೆ ಸಮರ್ಪಿತರಾದ ನಾಗರಿಕರು ರೂಪುಗೊಳ್ಳುತ್ತಾರೆ.

ವಿದ್ಯಾಭಾರತಿ, ಸೇವಾಭಾರತಿಯಂತಹ ಅದರ ಸಹಸಂಸ್ಥೆಗಳು ಮಾಡಿರುವ ಸಾಧನೆ-ಸೇವೆ ಅಪಾರ. ಆರೆಸ್ಸೆಸ್ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುತ್ತದೆ. ಜಾತೀಯತೆ ಮತ್ತು ಧಾರ್ವಿುಕ ವಿಭಜನೆಯನ್ನು ವಿರೋಧಿಸುತ್ತದೆ. ಸಮಾನತೆಯ ಸಂದೇಶ ಸಾರುತ್ತದೆ. ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಯುವ ಶಕ್ತಿಯನ್ನು ರಾಷ್ಟ್ರನಿರ್ವಣಕ್ಕೆ ಒಗ್ಗೂಡಿಸುವಲ್ಲಿ ಆರೆಸ್ಸೆಸ್ ಮಹತ್ವದ ಪಾತ್ರ ವಹಿಸಿದೆ. ಬಹಿರಂಗವಾಗಿ ಪ್ರತ್ಯೇಕತಾವಾದವನ್ನು ಬೋಧಿಸುವ ಮತೀಯ ಮೂಲಭೂತವಾದಿ ಗುಂಪುಗಳನ್ನು ನಿರ್ಲಕ್ಷಿಸುವ ರಾಜ್ಯ ಸರ್ಕಾರ, ಆರೆಸ್ಸೆಸ್​ನಂತಹ ದೇಶಪ್ರೇಮಿ ಸಂಘಟನೆಯ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲು ಹೊರಟಿರುವುದು ಮೂರ್ಖತನದ ಕ್ರಮವಲ್ಲದೆ ಇನ್ನೇನೂ ಅಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net