

ಸಿದ್ದಾಪುರ: ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಜ.1ರಿಂದ ಮಾರ್ಚ್ 15ರ ವರೆಗೆ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಿ ಜೋಗ ನಿರ್ವಹಣಾ ಪ್ರಾಧಿಕಾರ ಹಾಗೂ ಶಿವಮೊಗ್ಗ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಜೋಗ ಜಲಪಾತದ ಮುಖ್ಯ ದ್ವಾರ ನಿರ್ಮಾಣ ಹಾಗೂ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸುವ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿರುವುದರಿಂದ ಜ. 1ರಿಂದ ಎರಡೂವರೆ ತಿಂಗಳುಗಳ ಕಾಲ ಜೋಗ ಜಲಪಾತದ ದರ್ಶನ ಇಲ್ಲದಂತಾಗಿದೆ.
ನವೆಂಬರ್ನಿಂದ ಫೆಬ್ರವರಿವರೆಗೆ ದೂರದ ಊರಿನಿಂದ ಜೋಗ ಜಲಪಾತಕ್ಕೆ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸದ ನಿಮಿತ್ತ ಆಗಮಿಸುತ್ತಿದ್ದರು .ಆದರೆ ಇದೀಗ ಜೋಗ ಜಲಪಾತಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೆೇಧಿಸಿರುವುದು ಪ್ರವಾಸಿಗರಿಗೆ ತುಸು ಬೇಸರ ತರಿಸಿದೆ.
ಆದರೂ ಸಹ ಜೋಗ ಜಲಪಾತವು ಇನ್ನಷ್ಟು ಅಭಿವೃದ್ಧಿ ಮಾಡಿದರೆ ಬಂದ ಪ್ರವಾಸಿಗರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಂತಸದಿಂದ ಜೋಗ ಜಲಪಾತ ವೀಕ್ಷಣೆ ಮಾಡಬಹುದು ಎಂಬುದು ಜೋಗ ನಿರ್ವಹಣಾ ಪ್ರಾಧಿಕಾರದ ಅಭಿಪ್ರಾಯವಾಗಿದೆ.
ಹೊಸವರ್ಷಕ್ಕೆ ಜೋಗ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ತಮ್ಮ ಟ್ರೀಪ್ ಪ್ಲಾ್ಯನ್ನಲ್ಲಿ ಜೋಗಜಲಪಾತವನ್ನು ಕೈ ಬಿಡುವ ಸ್ಥಿತಿ ಉಂಟಾಗಿದೆ.
ಜೋಗ ಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರನ್ನೇ ನಂಬಿ ವ್ಯಾಪಾರ ಮಾಡಿ ಬಂದ ಹಣದಲ್ಲಿ ಜೀವನ ಸಾಗಿಸುವ ಸಾಕಷ್ಟು ಅಂಗಡಿಕಾರರು ಜೋಗ ಜಲಪಾತದ ಬಳಿ ಇದ್ದಾರೆ. ಅಭಿವೃದ್ಧಿ ಕಾಮಗಾರಿಗೋಸ್ಕರ ಜೋಗಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಅಂಗಡಿಕಾರರು ಪರದಾಡುವ ಸ್ಥಿತಿ ಉಂಟಾದರೂ ಜೋಗ ಜಲಪಾತ ಮತ್ತಷ್ಟು ಅಭಿವೃದ್ಧಿ ಆಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಸಹಕಾರ ನೀಡಬೇಕಾಗಿದೆ.