ವಿಐಪಿ ಸಂಚಾರದ ವೇಳೆ ಸೈರನ್ ಬಳಕೆಗೆ ಕಡಿವಾಣ

ambulence
Published on

ಬೆಂಗಳೂರು: ರಾಜ್ಯದಲ್ಲಿ ಗಣ್ಯ ವ್ಯಕ್ತಿಗಳ (ವಿಐಪಿ) ಸಂಚಾರದ ವೇಳೆ ಸೈರನ್ ಬಳಕೆ ನಿಷೇಧಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಡಾ.ಎಂ.ಎ.ಸಲೀಂ ಸೋಮವಾರ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರ ಸುರಕ್ಷತೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣ ದೃಷ್ಟಿಯಿಂದ ಸೈರನ್ ನಿಷೇಧಿಸಲಾಗಿದೆ. ಗಣ್ಯ ವ್ಯಕ್ತಿಗಳ ಸಂಚಾರದ ಸಮಯದಲ್ಲಿ ಅನವಶ್ಯಕವಾಗಿ ಸೈರನ್ ಬಳಕೆ ಮಾಡುವುದರಿಂದ ಗಣ್ಯ ವ್ಯಕ್ತಿಗಳು ಯಾವ ರಸ್ತೆಯಲ್ಲಿ ಚಲಿಸುತ್ತಿದ್ದಾರೆ ಎಂಬ ಬಗ್ಗೆ ಅನಧಿಕೃತ ವ್ಯಕ್ತಿಗಳಿಗೆ ಮಾಹಿತಿ ರವಾನೆಯಾಗುವುದಲ್ಲದೆ, ಗಣ್ಯ ವ್ಯಕ್ತಿಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಇದಲ್ಲದೆ, ಅನಗತ್ಯ ಸೈರನ್ ಬಳಕೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುವುದಲ್ಲದೇ ಶಬ್ದ ಮಾಲಿನ್ಯವೂ ಉಂಟಾಗುತ್ತದೆ.

ಅಪಘಾತ ಉಂಟಾಗುವ ಸಾಧ್ಯತೆ:

ಸಾರ್ವಜನಿಕ ರಸ್ತೆಗಳ ಮೇಲೆ ಹಠಾತ್ತಾಗಿ ಸೈರನ್ ಬಳಸುವುದರಿಂದ ಇತರ ವಾಹನ ಚಾಲಕರಿಗೆ ತೊಂದರೆಯಾಗುತ್ತದೆ. ಸೈರನ್ ಬಳಕೆಯಿಂದ ಗೊಂದಲ ಉಂಟಾಗಿ ವಾಹನವನ್ನು ಅಡ್ಡಾದಿಡ್ಡಿಯಾಗಿ ಚಲಿಸಿ ಬೆಂಗಾವಲು ಮತ್ತು ಇತರ ವಾಹನಗಳಿಗೆ ಅಪಘಾತ ಉಂಟಾಗುವ ಸಾಧ್ಯತೆ ಇರುತ್ತದೆ. ವಿಐಪಿ ಸಂಚಾರದ ವೇಳೆ, ತುರ್ತು ಚಲನವಲನದ ಅವಶ್ಯಕತೆಗಳಿಗೆ ದೂರಸಂಪರ್ಕ ಸಾಧನಗಳಾದ ವೈರ್‌ಲೆಸ್ ಕಮ್ಯುನಿಕೇಶನ್ ಮುಖಾಂತರ ಮಾಹಿತಿ ವಿನಿಮಯ ಮಾಡಬೇಕು. ಇದು ಶಿಸ್ತಿನ ಹಾಗೂ ಸುರಕ್ಷಿತ ಮಾರ್ಗವಾಗಿದೆ.

ಸೈರನ್‌ಗಳನ್ನು ಕೇವಲ ಆಂಬ್ಯುಲೆನ್ಸ್, ಪೊಲೀಸ್ ವಾಹನ, ಅಗ್ನಿಶಾಮಕ ವಾಹನಗಳು ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಬಳಸಬೇಕೆಂದು ಸಲೀಂ ಅವರು ಆದೇಶದಲ್ಲಿ ಸೂಚಿಸಿದ್ದಾರೆ. ಈ ಆದೇಶವನ್ನು ಘಟಕಾಧಿಕಾರಿಗಳು ಸಂಪೂರ್ಣವಾಗಿ ಪಾಲಿಸುವಂತೆ ತಮ್ಮ ಅಧೀನದ ಅಧಿಕಾರಿಗಳು ಮತ್ತು ಸಿಬ್ಬಂದಿ ಸೂಚಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net