

ನವದೆಹಲಿ: ಯಾವುದೇ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ (ಎಫ್ಡಿಐ) ಚೀನಾದ ಚಿಕ್ಕ ಪಾಲಿದ್ದರೂ ಅದಕ್ಕೆ ಸರ್ಕಾರದ ಅನುಮತಿಯನ್ನು ಕಡ್ಡಾಯಗೊಳಿಸಲಾಗಿದೆ. ಈ ಹಿಂದಿನ ‘ಮಹತ್ವದ ಫಲಾನುಭವಿ ಮಾಲೀಕತ್ವ’ (ಎಸ್ಬಿಒ) ನೀತಿಯನ್ನು ಸರ್ಕಾರ ಕೈ ಬಿಟ್ಟಿದೆ.
ಭಾರತದೊಂದಿಗೆ ಗಡಿ ಹೊಂದಿರುವ ದೇಶಗಳು ಹಲವು ನಿಯಮಗಳಿಗೆ ಒಳಪಟ್ಟು ಎಫ್ಡಿಐ ಹೂಡಿಕೆ ಮಾಡಬಹುದು ಎಂದು ಕೇಂದ್ರ ಸಂಪುಟ ಏಪ್ರಿಲ್ನಲ್ಲಿ ತೀರ್ಮಾನ ಕೈಗೊಂಡಿತ್ತು. ಕಂಪನಿ ಕಾನೂನು ಅನ್ವಯ ಶೇಕಡ 1 ಅಥವಾ ಅಕ್ರಮ ಹಣ ವರ್ಗಾವಣೆ ತಡೆ ಕಾನೂನಿನಲ್ಲಿ ನಿಗದಿಪಡಿಸಿರುವ ಶೇ. 25ರ ಮಿತಿಯ ಆಯ್ಕೆಯನ್ನು ನಿಗದಿಪಡಿಸಲಾಗಿತ್ತು. ಆದರೆ, ಹಲವು ಸುತ್ತಿನ ಪರಾಮರ್ಶೆ ಬಳಿಕ ಸರ್ಕಾರದ ನಿಲುವಿನಲ್ಲಿ ಬದಲಾವಣೆಯಾಗಿದೆ. ‘ಸಚಿವ ಸಂಪುಟ ನಿರ್ಧಾರ ಕನಿಷ್ಠ ಅಥವಾ ಗರಿಷ್ಠ ಮಿತಿ ಉಲ್ಲೇಖಿಸಿರಲಿಲ್ಲ. ಹೀಗಾಗಿ, ಒಂದು ಸಣ್ಣ ಭಾಗವಾದರೂ ಅದನ್ನು ಪರಿಗಣಿಸಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಚಿವರ ಸಮಿತಿ ಸಭೆ: ಇತ್ತೀಚೆಗೆ ಅಂತರ್ ಸಚಿವಾಲಯ ಸಮಿತಿಯ ಸಭೆಯೊಂದು ನಡೆದಿದ್ದು, ಸಂಬಂಧಿತ ಸಚಿವಾಲಯಗಳು ಅನುಸರಿಸಬೇಕಾದ ಮಾರ್ಗಸೂಚಿ ಬಗ್ಗೆ ರ್ಚಚಿಸಲಾಗಿದೆ. ವಾಣಿಜ್ಯ, ಕೈಗಾರಿಕೆ, ಇಂಧನ, ಟೆಲಿಕಾಂ ಮೊದಲಾದ ಖಾತೆಗಳು ಈ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ. ಮುಂದಿನ ಕೆಲ ದಿನಗಳಲ್ಲಿ ಮಾರ್ಗಸೂಚಿ ಅಂತಿಮಗೊಳ್ಳುವ ನಿರೀಕ್ಷೆಯಿದೆ.
ಏಷ್ಯಾ-ಪೆಸಿಫಿಕ್ ವಲಯದ ಅತಿ ಪ್ರಭಾವಶಾಲಿ ದೇಶಗಳ ಪಟ್ಟಿಯಲ್ಲಿ ಚೀನಾ ಅಮೆರಿಕದ ಸಮೀಪಕ್ಕೆ ಬಂದಿದೆ. ಚೀನಾಕ್ಕಿಂತ 10 ಪಾಯಿಂಟ್ ಮುನ್ನಡೆಯಲ್ಲಿದ್ದ ಅಮೆರಿಕ, ಕಳೆದೆರಡು ವರ್ಷಗಳಲ್ಲಿ ಐದು ಪಾಯಿಂಟ್ ಹಿನ್ನಡೆ ದಾಖಲಿಸಿದೆ ಎಂದು ಆಸ್ಪ್ರೇಲಿಯಾದ ಸಿಡ್ನಿ ಮೂಲದ ಲೋವಿ ಇನ್ಸ್ಟಿಟ್ಯೂಟ್ ಹೇಳಿದೆ. ಕರೊನಾ ಸನ್ನಿವೇಶದ ಕಳಪೆ ನಿರ್ವಹಣೆ, ವಿವಿಧ ರಾಷ್ಟ್ರಗಳ ಜತೆ ವಾಣಿಜ್ಯ ಜಗಳದ ಕಾರಣ ಅಮೆರಿಕದ ಅಂಕ ತುಸು ತಗ್ಗಿದೆ ಎಂದು ಲೋವಿ ಇನ್ಸ್ಟಿಟ್ಯೂಟ್ ಹೇಳಿದೆ. ಕರೊನಾ ಮಧ್ಯೆಯೂ ದೇಶದ ಆರ್ಥಿಕತೆಯಲ್ಲಿ ಚೀನಾ ಮುನ್ನಡೆ ಕಾಯ್ದುಕೊಂಡಿರುವುದರಿಂದ ಪಟ್ಟಿಯಲ್ಲಿ ಸತತ ಮೂರನೇ ವರ್ಷವೂ ಎರಡನೇ ಸ್ಥಾನದಲ್ಲಿ ಇದೆ. ಮೊದಲ ಸ್ಥಾನದಲ್ಲಿರುವ ಅಮೆರಿಕದ ಜತೆಗೆ ಅಂತರವನ್ನು ಕಡಿಮೆ ಮಾಡಿಕೊಂಡಿದೆ. ಪ್ರಭಾವಶಾಲಿ ಪಟ್ಟಿಯಲ್ಲಿ ಜಪಾನ್ ಮೂರನೇ ಸ್ಥಾನದಲ್ಲಿದ್ದು, ಭಾರತ ನಾಲ್ಕರಲ್ಲಿದೆ. ರಷ್ಯಾ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ಸಿಂಗಾಪುರ, ಥಾಯ್ಲೆಂಡ್, ಮಲೇಷ್ಯಾಗಳನ್ನು ಮೊದಲ 10 ರ್ಯಾಂಕಿಂಗ್ನಲ್ಲಿ ಗುರುತಿಸಲಾಗಿದೆ. ಇತರ ರಾಷ್ಟ್ರಗಳ ಜತೆ ಆರ್ಥಿಕ ಸಂಬಂಧ, ರಕ್ಷಣಾ ವೆಚ್ಚ, ಆಂತರಿಕ ಸ್ಥಿರತೆ ಸೇರಿ 128 ಅಂಶ ಆಧರಿಸಿ ರ‍್ಯಾಂಕಿಂಗ್ ಪಟ್ಟಿ ಸಿದ್ಧ ಪಡಿಸಲಾಗುತ್ತದೆ.
ಚೀನಾದ ಕಂಪನಿಗಳು ಸಿಂಗಾಪುರ ಅಥವಾ ಮಾರಿಷಸ್ನಂಥ ಮೂರನೇ ದೇಶದ ಮೂಲಕ ಭಾರತದಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಮಾಡುವುದನ್ನು ತಡೆಯುವುದು ಇದರ ಉದ್ದೇಶ ಎನ್ನಲಾಗಿದೆ. ಸ್ಟಾರ್ಟ್ಅಪ್ಗಳು, ಪೇಟಿಎಂನಿಂದ ಜೊಮಾಟೊ, ಬಿಗ್ಬಾಸ್ಕೆಟ್ವರೆಗೆ ಹಲವು ಕಂಪನಿಗಳು ಸರ್ಕಾರದ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ಈ ಎಲ್ಲ ಕಂಪನಿಗಳಲ್ಲಿ ಚೀನಿ ಹೂಡಿಕೆಯಿದೆ. ಅನೇಕ ಪ್ರಸ್ತಾವನೆಗಳು ಬಾಕಿಯಿದ್ದು, ಸರ್ಕಾರದ ಅನುಮೋದನೆಗಾಗಿ ಕಾಯುತ್ತಿವೆ.
ಎತ್ತರ ಪ್ರದೇಶಗಳಲ್ಲಿ ಮೈಕೊರೆಯುವ ಚಳಿಯಲ್ಲಿ ದೇಶದ ರಕ್ಷಣೆ ಮಾಡುತ್ತಿರುವ ಯೋಧರಿಗಾಗಿ ಅಮೆರಿಕದಿಂದ ಬೆಚ್ಚಗಿನ ಉಡುಪುಗಳನ್ನು ಭಾರತ ತುರ್ತಾಗಿ ಖರೀದಿಸುತ್ತಿದೆ. ಪೂರ್ವ ಲಡಾಖ್ನಲ್ಲಿ ಗಡಿಯಲ್ಲಿ ಚೀನಾದ ಉಪಟಳದಿಂದ ಉದ್ವಿಗ್ನತೆ ಹೆಚ್ಚಿಸುವ ಕಾರಣ ಈ ವರ್ಷ ಚಳಿಗಾಲದಲ್ಲೂ ಗಡಿಯಲ್ಲಿ ಸೈನಿಕರನ್ನು ನಿಯೋಜಿಸುವ ಅನಿವಾರ್ಯತೆ ಇದೆ. ಉಭಯ ದೇಶಗಳ ಸೇನೆ ಕ್ಷಿಪಣಿ ಸಜ್ಜಿತ ಟ್ಯಾಂಕ್ಗಳು, ಗಡಿ ಬಳಿಯ ವಾಯುನೆಲೆಗಳಲ್ಲಿ ಯುದ್ಧ ವಿಮಾನಗಳು ಸನ್ನದ್ಧ ಸ್ಥಿತಿಯಲ್ಲಿ ಇವೆ. ಇಲ್ಲಿ ಯುದ್ಧಕ್ಕಿಂತ ಮೈನಸ್ 30 ಡಿಗ್ರಿಗೂ ಕೆಳಕ್ಕೆ ಇಳಿಯುವ ತಾಪಮಾನದಿಂದಲೇ ಹೆಚ್ಚು ಸಾವು-ನೋವು ಸಂಭವಿಸುತ್ತದೆ.
ಚುಮಾರ್-ಡೆಮ್ೋಕ್ ಬಳಿ ಅಕ್ರಮವಾಗಿ ಪ್ರವೇಶಿಸಿದ್ದ ಓರ್ವ ಚೀನಿ ಯೋಧನನ್ನು ಭಾರತೀಯ ಸೇನೆ ಮಂಗಳವಾರ ಬೆಳಗ್ಗೆ ಬಂಧಿಸಿದೆ. ಈತ ಆಕಸ್ಮಿಕವಾಗಿ ಗಡಿ ದಾಟಿರಬಹುದು ಎನ್ನಲಾಗಿದೆ. ಬಂಧಿತ ಯೋಧನನ್ನು ವಾಂಗ್ ಯ ಲಾಂಗ್ ಎಂದು ಗುರುತಿಸಲಾಗಿದೆ. ಆತನಿಗೆ ಆಹಾರ, ಬೆಚ್ಚಗಿನ ಉಡುಪುಗಳನ್ನು ನೀಡಲಾಗಿದೆ. ಸೇನಾ ಶಿಷ್ಟಾಚಾರದ ಪ್ರಕ್ರಿಯೆಯಂತೆ ಆತನನ್ನು ವಾಪಸು ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.