

ಸರ್ವೀಸ್ ಚಾರ್ಜ್ ಮತ್ತು ಸರ್ವೀಸ್ ಟ್ಯಾಕ್ಸ್ ಇವೆರಡೂ ಗ್ರಾಹಕರಲ್ಲಿ ಸದಾ ಗೊಂದಲ ಮೂಡಿಸುವಂತಹ ವಿಚಾರ. ಸೇವಾ ತೆರಿಗೆ ಮತ್ತು ಸೇವಾ ಶುಲ್ಕ ನಡುವೆ ವ್ಯತ್ಯಾಸ ಅರಿಯದೆ ಗ್ರಾಹಕರು, ಬಳಿಕ ಕೋರ್ಟ್ಗೆ ಹೋಗಿರುವ ಪ್ರಕರಣಗಳೂ ಅನೇಕ. ಬಹುತೇಕ ಪ್ರಕರಣಗಳಲ್ಲಿ ಗ್ರಾಹಕ ಪರ ತೀರ್ಪು ಬಂದಿವೆ. ಇಷ್ಟಾಗ್ಯೂ, ರೆಸ್ಟೋರೆಂಟ್ಗಳು, ಹೋಟೆಲ್ಗಳು ಸರ್ವೀಸ್ ಚಾರ್ಜ್ ವಿಧಿಸುವುದನ್ನು ನಿಲ್ಲಿಸಿಲ್ಲ ಎಂಬುದು ವಾಸ್ತವ.
ಸರ್ವೀಸ್ ಚಾರ್ಜ್ ಗ್ರಾಹಕರ ಐಚ್ಛಿಕ ವಿಚಾರ. ಇದನ್ನು ಬಲವಂತವಾಗಿ ಗ್ರಾಹಕರಿಂದ ವಸೂಲಿ ಮಾಡುವಂತೆ ಇಲ್ಲ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಸ್ಪಷ್ಟಪಡಿಸಿತ್ತು. ಅಲ್ಲದೆ ಕಾನೂನು ಚೌಕಟ್ಟು ರೂಪಿಸುವುದಾಗಿ ಹೇಳಿತ್ತು.
ಯಾವುದೇ ರೆಸ್ಟೋರೆಂಟ್ ಅಥವಾ ಹೋಟೆಲ್ಗಳಲ್ಲಿ ಆಹಾರ ಪೂರೈಸಿದ ಬಳಿಕ ಬಿಲ್ ನೀಡುವಾಗ ಅದರಲ್ಲಿ ಸರ್ವೀಸ್ ಚಾರ್ಜ್ ನಮೂದಿಸಿ ವಸೂಲಿ ಮಾಡಿದರೆ, ಆಗ ಗ್ರಾಹಕರು ಕೋರ್ಟ್ ಮೊರೆ ಹೋಗಬಹುದು ಎಂದು ಗ್ರಾಹಕ ಕಾನೂನು ಪರಿಣತರು ಸಲಹೆ ನೀಡಿದ್ದಾರೆ.
ಏನಿದು ವಿದ್ಯಮಾನ?: ಗ್ರಾಹಕರಿಗೆ ಸೇವಾ ಶುಲ್ಕ ವಿಧಿಸುತ್ತಿರುವ ವಿಚಾರ ರ್ಚಚಿಸುವ ಸಲುವಾಗಿ ಕೇಂದ್ರ ಸರ್ಕಾರವು, ಜೂನ್ 2ರಂದು ರೆಸ್ಟೋರೆಂಟ್ ಮಾಲೀಕರ ಸಭೆಯನ್ನು ಆಯೋಜಿಸಿತ್ತು. ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಧೀನ ಗ್ರಾಹಕ ವ್ಯವಹಾರಗಳ ಇಲಾಖೆ ಈ ಸಭೆಯನ್ನು ಏರ್ಪಡಿಸಿತ್ತು. ಇದರಲ್ಲಿ, ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್ಆರ್ಎಐ) ಪ್ರತಿನಿಧಿಗಳು ಭಾಗವಹಿಸಿದ್ದರು. ರೆಸ್ಟೋರೆಂಟ್ಗಳು ಪೂರ್ವಯೋಜಿತವಾಗಿ ಗ್ರಾಹಕರಿಂದ ಸೇವಾ ಶುಲ್ಕವನ್ನು ಸಂಗ್ರಹಿಸುತ್ತಿವೆ. ಅಂತಹ ಯಾವುದೇ ಶುಲ್ಕವನ್ನು ಸ್ವಯಂಪ್ರೇರಿತವಾಗಿ ಮತ್ತು ಗ್ರಾಹಕರ ವಿವೇಚನೆಯಿಂದ ಸಂಗ್ರಹಿಸಲಾಗಿದ್ದರೂ ಕೂಡ ಅದು ಕಾನೂನಿನ ಪ್ರಕಾರ ಕಡ್ಡಾಯವಲ್ಲ ಎಂದು ಸರ್ಕಾರ ಈ ಸಭೆಯಲ್ಲಿ ಸ್ಪಷ್ಟಪಡಿಸಿತ್ತು.
ರೆಸ್ಟೋರೆಂಟ್ಗಳ ವಾದ: ಸೇವಾ ಶುಲ್ಕವನ್ನು ವಿಧಿಸುವುದು ರೆಸ್ಟೋರೆಂಟ್ನ ಖಾಸಗಿ ನೀತಿಯ ವಿಷಯ. ಅದನ್ನು ವಿಧಿಸಬೇಕೆ ಅಥವಾ ಬೇಡವೇ ಎಂಬುದು ಆಯಾ ರೆಸ್ಟೋರೆಂಟ್ನ ವಿವೇಚನಾಧಿಕಾರ. ಇಂತಹ ಶುಲ್ಕ ವಿಧಿಸುವುದರಲ್ಲಿ ಯಾವುದೇ ಅಕ್ರಮವಿಲ್ಲ. ಸೇವಾ ಶುಲ್ಕದ ಮಾಹಿತಿ ಯನ್ನು ಮೆನು ಕಾರ್ಡ್ಗಳಲ್ಲಿ ನಮೂದಿಸಲಾಗುತ್ತದೆ. ಅದಿಲ್ಲದಿದ್ದರೆ ರೆಸ್ಟೋರೆಂಟ್ ಆವರಣದಲ್ಲಿ ಪ್ರದರ್ಶಿಸಲಾಗುತ್ತದೆ. ಆದ್ದರಿಂದ ಸೇವೆಗಳನ್ನು ಪಡೆಯುವ ಮೊದಲೇ ಗ್ರಾಹಕರಿಗೆ ಈ ಶುಲ್ಕದ ಅರಿವು ಇರುತ್ತದೆ. ಇದು ಗ್ರಾಹಕರು ಮತ್ತು ರೆಸ್ಟೋರೆಂಟ್ ನಡುವಿನ ಒಪ್ಪಂದವಾಗಿದ್ದು, ಇಲ್ಲಿ ಅನ್ಯಾಯವೇನೂ ಇಲ್ಲ. ಸರ್ಕಾರಕ್ಕೂ ಈ ಶುಲ್ಕದ ಮೇಲೆ ಜಿಎಸ್ಟಿ ಪಾವತಿಯಾಗುತ್ತದೆ ಎಂದು ಎನ್ಆರ್ಎಐ ವಿವರಿಸಿದೆ.
ಈ ದುಡ್ಡು ಎಲ್ಲಿ ಹೋಗುತ್ತೆ?: ರೆಸ್ಟೋರೆಂಟ್ಗಳು ಸಂಗ್ರಹಿಸುವ ಸರ್ವೀಸ್ ಚಾರ್ಜ್ ಎಲ್ಲಿ ವಿನಿಯೋಗವಾಗುತ್ತದೆ? ಎಂಬುದು ಸಹಜ ಕುತೂಹಲದ ಪ್ರಶ್ನೆ. ಇದರಲ್ಲಿ ಬಹುಪಾಲು ರೆಸ್ಟೋರೆಂಟ್ ಉದ್ಯೋಗಿಗಳ ಒಳಿತಿಗೆ ಬಳಕೆಯಾಗುತ್ತದೆ. ಕಷ್ಟಕಾಲದಲ್ಲಿ ನೆರವಾಗುವುದಕ್ಕೂ ಇದನ್ನು ಬಳಸಲಾಗುತ್ತದೆ ಎಂಬುದು ಸಮಜಾಯಿಷಿ. ಆದರೆ ಇಂತಿಷ್ಟು ಪ್ರಮಾಣ ಎಂಬುದರ ಉಲ್ಲೇಖವಿಲ್ಲ. ಹೀಗಾಗಿ ಇವು ಉದ್ಯೋಗಿಗಳಿಗೆ ಸಿಗುತ್ತದೆ ಎಂಬುದು ಖಾತರಿ ಇಲ್ಲ ಎಂಬ ಮಾತು ಉದ್ಯೋಗಿಗಳ ನಡುವೆ ಕೇಳಿ ಬಂದಿದೆ.
ಸೇವಾ ಶುಲ್ಕದ ವಿಚಾರ: ಇದನ್ನು ಜಗತ್ತಿನಾದ್ಯಂತ ಸಾಂರ್ದಭಿಕವಾಗಿ ಗ್ರಾಚ್ಯುಟಿ ಅಥವಾ ಟಿಪ್ಸ್ ಎಂದು ಕರೆಯುತ್ತಾರೆ. ಬಹುತೇಕ ರೆಸ್ಟೋರೆಂಟ್ಗಳು ಸೇವಾ ಶುಲ್ಕವನ್ನೂ ತಾವೇ ನಿರ್ಧರಿಸುತ್ತವೆ. ಮೆನುವಿನ ಕೆಳಗೆ ನಕ್ಷತ್ರ ಚಿಹ್ನೆಯೊಂದಿಗೆ ಈ ಶುಲ್ಕದ ವಿವರ ಇರುತ್ತದೆ. ನ್ಯಾಯ ಸಮ್ಮತವಲ್ಲದ ಈ ಶುಲ್ಕ ವಿವಾದದ ಕೇಂದ್ರ ಬಿಂದು. ಸಾಮಾನ್ಯವಾಗಿ ಟಿಪ್ಸ್ ಎಂಬುದು ನೇರವಾಗಿ ಸಪ್ಲೈಯರ್/ಸರ್ವರ್ಗೆ ಸಲ್ಲುತ್ತದೆ. ಗ್ರಾಹಕರು ಐಚ್ಛಿಕವಾಗಿ ಖುಷಿಯಿಂದ ಸಪ್ಲೈಯರ್/ ಸರ್ವರ್ಗೆ ನೀಡುವ ಟಿಪ್ಸ್ ಅನ್ನು ರೆಸ್ಟೋರೆಂಟ್ಗಳು ಅಧಿಕೃತಗೊಳಿಸಿ ವಸೂಲಿ ಮಾಡುವ ಪ್ರವೃತ್ತಿ ಇದು ಎಂಬ ಟೀಕೆಯೂ, ಆರೋಪವೂ ಇದೆ.
ಗ್ರಾಹಕರು ಹೇಳಿದ್ದೇ ನಡೆಯೋದು..: ಕಸ್ಟಮರ್ ಈಸ್ ಕಿಂಗ್ ಎಂಬ ವಾಡಿಕೆಯ ಮಾತಿನಂತೆ, ಸೇವಾ ಶುಲ್ಕದ ವಿಚಾರದಲ್ಲಿ ಗ್ರಾಹಕರು ಹೇಳಿದ್ದೇ ನಡೆಯೋದು. ಒಂದೊಮ್ಮೆ ರೆಸ್ಟೋರೆಂಟ್ಗಳು ಸೇವಾ ಶುಲ್ಕ ವಿಧಿಸಿದರೆ, ಆಗ ಗ್ರಾಹಕರು ಅದನ್ನು ನೀಡಲು ನಿರಾಕರಿಸಿದರೆ ರೆಸ್ಟೋರೆಂಟ್ಗಳು ಆ ಶುಲ್ಕವನ್ನು ವಿಧಿಸುವಂತಿಲ್ಲ. ಅದು ಗ್ರಾಹಕರ ಹಕ್ಕು ಎಂದು ಪರಿಣತರು ವಿವರಿಸಿದ್ದಾರೆ.
ಬಿಲ್ನಲ್ಲಿ ಏನೇನಿರುತ್ತವೆ?: ರೆಸ್ಟೋರೆಂಟ್ ಬಿಲ್ನಲ್ಲಿ ನಮೂದಿಸಲ್ಪಡುವ ಶುಲ್ಕಗಳು ಮತ್ತು ತೆರಿಗೆಗಳ ವಿವರ ಹೀಗಿದೆ - ಆಹಾರ ಶುಲ್ಕ (ಮೆನುವಿನಲ್ಲಿರುವಂತೆ), ಸೇವಾ ಶುಲ್ಕ (ಶೇಕಡ 5 ರಿಂದ 15), ಇವರೆಡರ ಮೇಲೆ ಶೇಕಡ 5 ಜಿಎಸ್ಟಿ (ಐಎಖಖ+ಖಎಖಖ). ಇದು ಎಲ್ಲ ರೆಸ್ಟೋರೆಂಟ್ಗಳಿಗೆ ಅನ್ವಯವಾಗುವ ಫುಡ್ ಬಿಲ್ನ ಮಾದರಿ. ಅಕಸ್ಮಾತ್ ಹೋಟೆಲ್ನಲ್ಲಿ ರೆಸ್ಟೋರೆಂಟ್ ಮತ್ತು ಲಾಡ್ಜ್ ಸೌಲಭ್ಯ ಇದ್ದರೆ ಕೊಠಡಿ ದರ 7,500 ರೂಪಾಯಿ (ಬಹುತೇಕ ಪಂಚತಾರಾ ಹೋಟೆಲ್)ಗಿಂತ ಹೆಚ್ಚಿದ್ದರೆ ಜಿಎಸ್ಟಿ ಶೇಕಡ 18 ಇರುತ್ತದೆ. ಕಾನೂನು ಪ್ರಕಾರ ಜಿಎಸ್ಟಿ ಕಡ್ಡಾಯ ಅಂಶ. ಇದರಲ್ಲಿ ಸೇವಾ ಶುಲ್ಕ ಐಚ್ಛಿಕ.