ಶುಚಿ ಯೋಜನೆ ಮರು ಆರಂಭಿಸಿ

kalluru
ಶುಚಿ ಯೋಜನೆ ಆರಂಭಕ್ಕೆ ಆಗ್ರಹಿಸಿ ಶಾಂತವೇರಿ ಗೋಪಾಲ ಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ಕಲ್ಲೂರು ಮೇಘರಾಜ್, ಪ್ರೊ.ಕಲ್ಲನ, ಬಿ.ಜಗದೀಶ್, ಆದಿಶೇಷ, ಕೋಡ್ಲು ಶ್ರೀಧರ್, ಬಾಬು, ಶಂಕ್ರಾನಾಯ್ಕಾ, ಟಿ.ಆರ್.ಕೃಷ್ಣಪ್ಪ ಮುಂತಾದವರು ಸಿದ್ದಲಿಂಗ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
Published on

ಶಿವಮೊಗ್ಗ: ಹದಿಹರೆಯದ ವಿದ್ಯಾರ್ಥಿನಿಯರಿಗೆ ಶುಚಿ ಯೋಜನೆಯಡಿ ನೀಡುವ ಸ್ಯಾನಿಟರಿ ಪ್ಯಾಡ್ ಕಿಟ್‌ಗಳ ಪೂರೈಕೆ ಸ್ಥಗಿತಗೊಳಿಸಿರುವುದು ಸರಿಯಲ್ಲ. ಕೂಡಲೇ ವಿತರಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶಾಂತವೇರಿ ಗೋಪಾಲ ಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಪದಾಧಿಕಾರಿಗಳು ಮಂಗಳವಾರ ಎಡಿಸಿ ಸಿದ್ದಲಿಂಗ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಈ ಯೋಜನೆಯಿಂದ ಸುಮಾರು 19 ಲಕ್ಷ ವಿದ್ಯಾರ್ಥಿನಿಯರಿಗೆ ಅನುಕೂಲವಾಗುತ್ತಿತ್ತು. ಪ್ರತಿ ತಿಂಗಳು 1.39 ಕೋಟಿ ಪ್ಯಾಡ್‌ಗಳನ್ನು ಒದಗಿಸಲಾಗುತ್ತಿತ್ತು. ವಾರ್ಷಿಕ ಸುಮಾರು 40.50 ಕೋಟಿ ರೂ. ಅನುದಾನ ಬಳಕೆಯಾಗುತ್ತಿತ್ತು. ಇಂತಹ ಒಳ್ಳೆಯ ಯೋಜನೆ ಮಾರ್ಚ್‌ನಿಂದ ಸ್ಥಗಿತವಾಗಿರುವುದು ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ ಸ್ಯಾನಿಟರಿ ನ್ಯಾಪ್ಕಿನ್ ವಿತರಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ. ಇದನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ರಾಜ್ಯ ಸರ್ಕಾರ ತಕ್ಷಣವೇ ಶುಚಿ ಯೋಜನೆಯನ್ನು ಆರಂಭಿಸಬೇಕೆಂದು ಒತ್ತಾಯಿಸಿದರು.
ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಟ್ರಸ್ಟಿಗಳಾದ ಪ್ರೊ. ಕಲ್ಲನ, ಶಂಕ್ರಾನಾಯ್ಕ, ಟಿ.ಆರ್.ಕೃಷ್ಣಪ್ಪ, ಬಿ.ಜಗದೀಶ್, ಕೋಡ್ಲು ಶ್ರೀಧರ್, ಆದಿಶೇಷ, ಕೆ.ಆರ್.ಶಿವಣ್ಣ, ಮಂಜಾನಾಯ್ಕ, ಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net