

ಕೋಲಾರ: ಮನುಷ್ಯ ಇತ್ತೀಚಿನ ದಿನಗಳಲ್ಲಿ ಎಲ್ಲವನ್ನು ಹೊಂದಿದ್ದರೂ ಬದುಕಿನಲ್ಲಿ ಎಡವುತ್ತಿರುವದನ್ನು ಕಾಣಲಾಗುತ್ತಿದೆ. ಇದರಿಂದ ಮುಕ್ತರಾಗಿ ನೆಮ್ಮದಿಯ ಜೀವನ ರೂಪಿಸಿಕೊಳ್ಳಲು ದೇವರು, ಗುರುವಿನ ಸ್ಮರಣೆ ಮಾಡಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ತಾಲೂಕಿನ ನಾಗಲಪುರ ಸಂಸ್ಥಾನಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಲಿಂಗಧಾರಣೆ ಕಾರ್ಯಕ್ರಮದಲ್ಲಿ ಇಷ್ಟ ಲಿಂಗಮಹಾಪೂಜೆ ನೆರವೇರಿಸಿ, ಆಶೀರ್ವಚನ ನೀಡಿದರು.
ಹಿಂದಿನ ಕಾಲದಲ್ಲಿ ಸಂಪನ್ಮೂಲ ಕೊರತೆ ಇತ್ತು. ಆದರೆ ಈಗ ಮನುಷ್ಯ ನೆಮ್ಮದಿ, ಶಾಂತಿ, ಸಂತೃಪ್ತಿಯನ್ನು ಧರ್ಮಪೀಠಗಳಲ್ಲಿ ಕಾಣಲು ಸಾಧ್ಯವಾಗುತ್ತಿದೆ ಎಂದ ಶ್ರೀಗಳು, ಮನುಷ್ಯ ಅತೃಪ್ತಿ, ಅಸಮಾನತೆಯಿಂದ ಬಳಲುತ್ತಿದ್ದಾನೆ. ಇದಕ್ಕೆ ಧಾರ್ಮಿಕ ಆರಾಧನೆ, ಧರ್ಮ, ದೇವರು, ಗುರು ಇಲ್ಲದೆ ಇರುವುದರಿಂದ ಎಡವುವ ಪ್ರವೃತ್ತಿ ಹೆಚ್ಚಾಗಿದೆ ಎಂದು ತಿಳಿಸಿದರು.
ನಿಂತ ನೆಲ, ಹರಿಯುವ ನೀರು, ಗಾಳಿ ಕೊಟ್ಟಿರುವುದು ಭಗವಂತ. ಮನುಷ್ಯ ಕೊಟ್ಟಿದ್ದು ಕೆಲ ದಿನದ ತನಕ, ದೇವರು ಕೊಟ್ಟಿದ್ದು ಕೊನೇ ತನಕ ಎಂಬ ಮಾತಿದೆ. ದೇವರ ಸ್ಮರಣೆ ಮಾಡಬೇಕಾದ ಅಗತ್ಯವಿದೆ. ಮನುಷ್ಯನಿಗೆ ಭಗವಂತ ಸಂಪನ್ಮೂಲಗಳನ್ನು ಉದಾರವಾಗಿ ಕೊಟ್ಟಿದ್ದಾನೆ. ಪ್ರತಿ ದಿನ ಕೆಲ ನಿಮಿಷಗಳ ಕಾಲ ಸ್ಮರಣೆ ಮಾಡಿದರೆ ಪ್ರಜ್ಞಾವಂತರನ್ನಾಗಿ ಮಾಡುತ್ತಾನೆ. ಯಾವುದೇ ವಿಷಯದಲ್ಲಿ ಘರ್ಷಣೆಯಿಲ್ಲದಂತೆ ನೋಡಿಕೊಳ್ಳುತ್ತಾನೆ ಎಂದರು.
ಭಗವಂತನನ್ನು ಕಾಣಲು ಮೊದಲಿಗೆ ಗುರು ಬೇಕು, ಇದರಿಂದಲೇ ಗುರುವಿಗೆ ಮೊದಲ ಸ್ಥಾನ ನೀಡಲಾಗಿದೆ. ಶಿವನನ್ನು ಅರಿತುಕೊಳ್ಳಬೇಕಾದರೆ ಗುರು ಮಾರ್ಗದರ್ಶನ ಅವಶ್ಯವಾಗಿದೆ. ಹೀಗಾಗಿ ಎಲ್ಲ ಸಂಬAಧಗಳಲ್ಲಿ ಗುರುವಿಗೆ ಮೊದಲ ಸ್ಥಾನ ನೀಡಿದ್ದು, ಗುರುವಿಲ್ಲದೆ ಆಚಾರವಿಲ್ಲ, ಬಸವ ರುದ್ರಾಕ್ಷ ಮಂತ್ರವಿಲ್ಲ ಎಂದು ಬಸವ ಹೇಳಿರುವ ಮಾತು ಸತ್ಯವಾಗಿದೆ ಎಂದು ವಿವರಿಸಿದರು.
ಭಾರತರತ್ನ ಡಾ.ವಿಶ್ವೇಶ್ವರಯ್ಯ ಅವರು ಬಡತನದಲ್ಲಿ ಮುದ್ದೇನಹಳ್ಳಿಯಲ್ಲಿ ಜನಿಸಿದವರು. ಶಾಲಾ ಶುಲ್ಕ ಕಟ್ಟಲು ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿದ್ದ ಅವರನ್ನು ಕೋಲಾರ ಜಿಲ್ಲೆಯು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಮೇಣದ ಬತ್ತಿ ಬೆಳಕಿನಲ್ಲಿ ಓದಿ ಸಾಧನೆ ಮಾಡಿದವರು ಮಾರ್ಗದರ್ಶಕರಾಗಿದ್ದಾರೆ. ಅವರು ನೀಡಿದ ಕೊಡುಗೆಗಳು ನಿಜಕ್ಕೂ ನಮ್ಮ ಮುಂದಿವೆ ಎಂದು ಬಣ್ಣಿಸಿದರು.
ಲಿಂಗಧಾರಣೆ, ನಾಮಕರಣವನ್ನು ಸ್ವಗೃಹದಲ್ಲಿ ಮಾಡಿ ಆಶೀರ್ವಾದ ಪಡೆದುಕೊಳ್ಳಬಹುದಿತ್ತು. ಮಠದ ಅಭಿಮಾನಿಗಳು, ಭಕ್ತರು ಬರಲಿ ಎಂಬ ಉದ್ದೇಶದಿಂದ ಉದಾರ ಭಾವನೆಯಿಂದ ಮಂಟಪದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಪ್ರಯೋಜನ, ಪಾಲನೆ ಸಾರ್ವಜನಿಕರು ಮಾಡಬೇಕು ಎಂದು ಸಲಹೆ ನೀಡಿದರು.
ಬಾಳೆಹೊನ್ನೂರು ಖಾಸಾಶಾಖಾ ಮಠದ ಎಡೆಯೂರು ಶ್ರೀ ರೇಣುಕಶಿವಾಚಾರ್ಯ ಸ್ವಾಮೀಜಿ, ನಾಗಲಪುರ ಸಂಸ್ಥಾನ ಮಠದ ಶ್ರೀ ತೇಜೇಶ ಲಿಂಗ ಶಿವಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾ ಸಭಾದ ತಾಲೂಕು ಅಧ್ಯಕ್ಷ ಸಿದ್ದಲಿಂಗ ಒಡೆಯರ್, ಸೇವಾಕರ್ತರಾದ ಚಂದನ, ಡಿ.ಎಂ.ಕಾರ್ತಿಕ್ ಇತರರಿದ್ದರು.