ಸಂಪಾದಕೀಯ| ಜನರ ಮೇಲೆ ಜವಾಬ್ದಾರಿ

Vidhana Soudha
Published on

ಕರೊನಾ ಸೋಂಕನ್ನು ನಿಯಂತ್ರಿಸಲು ದೇಶದಾದ್ಯಂತ ಹೆಚ್ಚುಕಡಿಮೆ ಎರಡು ತಿಂಗಳುಗಳ ಕಾಲ ಲಾಕ್​ಡೌನ್ ವಿಧಿಸಲಾಗಿತ್ತು. ಬಳಿಕ ಜನಜೀವನ ಒಂದಿಷ್ಟು ಚೇತರಿಕೆ ಕಾಣುತ್ತಿದ್ದ ಹಂತದಲ್ಲೇ ಕರ್ನಾಟಕದಲ್ಲಿ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರಿಂದ ಮತ್ತೆ ಒಂದು ವಾರದ ಲಾಕ್​ಡೌನ್ ವಿಧಿಸಲಾಗಿತ್ತು. ಕರೊನಾ ಸೋಂಕು ಪ್ರಸರಣದ ವೇಗ ಇನ್ನೂ ನಿಯಂತ್ರಣಕ್ಕೆ ಬಾರದೆ ಇರುವುದರಿಂದ ಮತ್ತೊಂದಿಷ್ಟು ಅವಧಿಗೆ ಲಾಕ್​ಡೌನ್ ಮುಂದುವರಿಸಬೇಕು ಎಂಬ ಸಲಹೆಯನ್ನು ತಜ್ಞರು ನೀಡಿದ್ದರು. ಆದರೆ, ಮಂಗಳವಾರ ಸಂಜೆ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ಲಾಕ್​ಡೌನ್ ವಿಸ್ತರಣೆಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದು, ಇಂದಿನಿಂದ (ಬುಧವಾರ) ಜನಜೀವನ ಮತ್ತೆ ಸಹಜಸ್ಥಿತಿಗೆ ಮರಳಲಿದೆ.

‘ಕೋವಿಡ್ ನಿಯಂತ್ರಣಕ್ಕೆ ಲಾಕ್​ಡೌನ್ ಪರಿಹಾರವಲ್ಲ. ಜನತೆ ಮಾಸ್ಕ್​ನ್ನು ಕಡ್ಡಾಯವಾಗಿ ಧರಿಸಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಆರೋಗ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದಿರುವ ಮುಖ್ಯಮಂತ್ರಿ ‘ಜನಪ್ರತಿನಿಧಿಗಳು, ಆರೋಗ್ಯ ಕಾರ್ಯಕರ್ತರು ಜೀವದ ಹಂಗನ್ನೇ ತೊರೆದು ಜನರ ಆರೋಗ್ಯಕ್ಕಾಗಿ ಶ್ರಮಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಜನರು ಜವಾಬ್ದಾರಿ ಮೆರೆಯಬೇಕು ಮತ್ತು ಆರೋಗ್ಯ ಮಾರ್ಗಸೂಚಿಗಳನ್ನು ಪಾಲಿಸಬೇಕು. ಅಂದಾಗಲೇ ಕರೊನಾವನ್ನು ನಿಯಂತ್ರಿಸಲು ಸಾಧ್ಯ’ ಎಂದು ಸ್ಪಷ್ಟವಾಗಿ ನುಡಿದಿದ್ದಾರೆ. ಆರ್ಥಿಕತೆಯನ್ನು, ವ್ಯಾಪಾರ-ವಹಿವಾಟನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಈಗಾಗಲೇ ಎಲ್ಲ ವಲಯಗಳು ಭಾರಿ ನಷ್ಟ ಅನುಭವಿಸಿದ್ದು, ಉದ್ಯೋಗನಷ್ಟ, ಸಂಬಳಕಡಿತದ ಪ್ರಮಾಣ ಹೆಚ್ಚುತ್ತಲೇ ಇದೆ. ಹೀಗಿರುವಾಗ ಮತ್ತಷ್ಟು ಅವಧಿಗೆ ಲಾಕ್​ಡೌನ್ ವಿಸ್ತರಣೆಯಾದರೆ ಹತ್ತುಹಲವು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಸ್ಪಷ್ಟ.

ಈಗಾಗಲೇ ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ಸರ್ಕಾರ ತನ್ನ ಪ್ರಯತ್ನಗಳನ್ನು ಮಾಡುತ್ತಿದೆ. ರಾಜ್ಯದಲ್ಲೂ 5ಟಿ ತಂತ್ರ ಅನುಸರಿಸಲು ನಿರ್ಧರಿಸಲಾಗಿದೆ. ‘ಪರೀಕ್ಷಿಸುವುದು, ಪತ್ತೆ ಮಾಡುವುದು, ಮಾಹಿತಿ ಕಲೆ ಹಾಕುವುದು, ಚಿಕಿತ್ಸೆ ನೀಡುವುದು, ತಂತ್ರಜ್ಞಾನ’ವನ್ನು ಬಳಸಿಕೊಳ್ಳಲು ತಜ್ಞರು ಸಲಹೆ ನೀಡಿದ್ದು, ಅದರ ಸೂಕ್ತ ಅನುಷ್ಠಾನಕ್ಕೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಲಾಕ್​ಡೌನ್ ಅವಧಿ ಮುಗಿದಿರುವುದರಿಂದ ಮತ್ತು ಕರೊನಾ ಸೇನಾನಿಗಳ ಮೇಲಿನ ಒತ್ತಡ ಹೆಚ್ಚಿರುವುದರಿಂದ ಪ್ರಸಕ್ತ ಜನರ ಮೇಲಿನ ಜವಾಬ್ದಾರಿ ಹೆಚ್ಚಿದೆ. ಸೂಕ್ತ ಎಚ್ಚರಿಕೆ, ಆರೋಗ್ಯ ಕ್ರಮಗಳ ಜತೆ ಜನಜೀವನವನ್ನು ಮತ್ತೆ ಎಂದಿನಂತೆ ಮುಂದುವರಿಸಬೇಕಾಗಿದೆ. ಲಾಕ್​ಡೌನ್ ಇಲ್ಲ ಎಂಬ ನೆಪವೇ ಉದಾಸೀನ ಅಥವಾ ನಿರ್ಲಕ್ಷ್ಯಕ್ಕೆ ಕಾರಣವಾಗಬಾರದು. ಕೆಲ ಮಹಾನಗರಗಳಲ್ಲಿ ಜನರ ಪ್ರಯತ್ನ ಮತ್ತು ಬೆಂಬಲದ ಮೂಲಕ ಕರೊನಾ ನಿಯಂತ್ರಣಕ್ಕೆ ತರಲು ಸಾಧ್ಯವಾಗಿದೆ. ಬೆಂಗಳೂರು ಸೇರಿ ಕರ್ನಾಟಕದಲ್ಲೂ ಈ ಮಾದರಿ ಜಾರಿಗೆ ಬರಬೇಕು. ಜನರು ಸ್ವಯಂಸ್ಪೂರ್ತಿಯಿಂದ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು. ಅನಗತ್ಯ ಓಡಾಟ ತಪ್ಪಿಸುವುದು, ಅನಿವಾರ್ಯ ಕೆಲಸಗಳಿಗೆ ಸಂಚರಿಸುವಾಗ ತಪ್ಪದೇ ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು ಸೇರಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕ್ರಮಗಳನ್ನೂ ಅಳವಡಿಸಿಕೊಳ್ಳಬೇಕಿದೆ. ಜನರ ಪ್ರಯತ್ನವೇ ಕರೊನಾ ವಿರುದ್ಧ ಹೋರಾಟಕ್ಕೆ ಪ್ರಬಲ ಅಸ್ತ್ರವಾಗುವ ಸಂದರ್ಭವಿದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net