ಸಮಕಾಲೀನ ಸಮಸ್ಯೆಗಳಿಗೆ ಅಣತಿ ಕಾವ್ಯಗಳ ಸ್ಪಂದನೆ

book launch
ಶಿವಮೊಗ್ಗದಲ್ಲಿ ಲೇಖಕ ಸತ್ಯನಾರಾಯಣ ರಾವ್ ಅಣತಿ ಅವರ ಮೌನ ಮಿಗಿಲು ಹಾಗೂ ನೀಲಾಂಜನೆ ಮಣಿಮೇಖಲೈ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಚನ್ನಪ್ಪ ಅಂಗಡಿ, ಪ್ರೊ. ಶರತ್ ಅನಂತಮೂರ್ತಿ, ಸತ್ಯನಾರಾಯಣ ರಾವ್ ಅಣತಿ, ಭಾರತೀದೇವಿ ಇದ್ದರು.
Published on

ಶಿವಮೊಗ್ಗ: ಸಮಕಾಲೀನ ಸಮಸ್ಯೆಗಳಿಗೆ ಲೇಖಕ ಸತ್ಯನಾರಾಯಣ ರಾವ್ ಅಣತಿ ಅವರ ಕಾವ್ಯಗಳಲ್ಲಿ ಸ್ಪಂದಿಸುವ ಗುಣವಿದೆ. ಅವರ ಚಿಂತನೆಗಳಿಂದು ಅತ್ಯಂತ ಮಹತ್ವ ಪಡೆದುಕೊಂಡಿವೆ ಎಂದು ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಹೇಳಿದರು.

ನಗರದ ಡಿವಿಎಸ್ ಸಿಂಗಾರ ಸಭಾಂಗಣದಲ್ಲಿ ಬೆಂಗಳೂರಿನ ಚಾರುಲತಾ ಪ್ರಕಾಶನದಿಂದ ಲೇಖಕ ಸತ್ಯನಾರಾಯಣರಾವ್ ಅಣತಿ ಅವರ ಸಮಗ್ರ ಕವನ ಸಂಕಲನ ಮೌನ ಮಿಗಿಲು ಹಾಗೂ ನೀಲಾಂಜನೆ ಮಣಿಮೇಖಲೈ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಸತ್ಯನಾರಾಯಣ ರಾವ್ ಅವರು ಇಳಿ ವಯಸ್ಸಿನಲ್ಲೂ ಕ್ರಿಯಾಶೀಲರಾಗಿ ಕಾವ್ಯ, ನಾಟಕ ಸೇರಿ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡುತ್ತಿರುವುದು ಎಲ್ಲರಿಗೂ ಪ್ರೇರಣದಾಯಕ. ಪ್ರತಿ ಕಾವ್ಯಗಳನ್ನೂ ಅವರು ಅನುಭವಿಸಿ ಬರೆದಂತಿದೆ. ಹೀಗಾಗಿಯೇ ಅವರ ಬರವಣಿಗೆ ಸಮಾಜಕ್ಕೆ ಸ್ಪಂದಿಸುತ್ತಿದೆ ಎಂದು ಹೇಳಿದರು.

ಸಾಹಿತಿ ಭಾರತೀದೇವಿ ಮಾತನಾಡಿ, ನಾಲ್ಕೈದು ದಶಕಗಳ ಸಮಾಜದ ಚಲನೆ, ನಿಸರ್ಗದ ವಿವೇಕ ಅವರ ಕಾವ್ಯಗಳಲ್ಲಿ ಅಭಿವ್ಯಕ್ತಗೊಂಡಿದೆ ಎಂಬುದು ಗಮನಾರ್ಹ ಎಂದರು.

ಲೇಖಕ ಸತ್ಯನಾರಾಯಣರಾವ್ ಅಣತಿ ಮಾತನಾಡಿ, ಹಲವು ವರ್ಷಗಳ ನಂತರ ನನ್ನ ಎರಡು ಕೃತಿಗಳು ಬಿಡುಗಡೆಗೊಳ್ಳುತ್ತಿವೆ. ಪ್ರಕಾಶಕ ಬಿ.ಎಸ್.ವಿದ್ಯಾರಣ್ಯ ಕೃತಿಗಳನ್ನು ಪ್ರಕಟಿಸಿದ್ದು, ಮೌನಮಿಗಿಲು ಎಂಬುದು ನನ್ನ ಎಲ್ಲ ಕಾವ್ಯಗಳ ಸಮಗ್ರ ಕೃತಿ. ನನ್ನ ಹಲವು ನಾಟಕಗಳನ್ನು ಶಿವಮೊಗ್ಗದ ರಂಗ ಕಲಾವಿದರು ಅಭಿನಯಿಸಿದ್ದಾರೆ ಎಂದು ತಿಳಿಸಿದರು.

ಅಣತಿ ರಚಿತ ಭಾವಗೀತೆಗಳನ್ನು ಗಾಯಕ ಕೆ.ಯುವರಾಜ್ ಹಾಡಿದರು. ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶಕ ಬಿ.ಎಸ್.ವಿದ್ಯಾರಣ್ಯ, ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್ ಉಪಸ್ಥಿತರಿದ್ದರು.

ನಾಟಕದಲ್ಲಿ ಅಭಿವ್ಯಕ್ತಿಯೇ ವಿಭಿನ್ನ

ನೀಲಾಂಜನೆ ಮಣಿಮೇಖಲೈ ನಾಟಕದಲ್ಲಿ ಅಭಿವ್ಯಕ್ತಿಯೇ ವಿಭಿನ್ನ. ಅವರ ಊರಿನಲ್ಲಿರುವ ಐತಿಹ್ಯ, ಇಂದಿನ ಸಮಾಜದ ಸ್ಥಿತಿ ಬಗ್ಗೆ ಕಟ್ಟಿಕೊಟ್ಟ ನಾಟಕ ಇದಾಗಿದೆ ಎಂದು ಕಾರ್ಕಳ ರಂಗಾಯಣ ನಿರ್ದೇಶಕ ವೆಂಕಟರಮಣ ಐತಾಳ ಹೇಳಿದರು. ಇದೊಂದು ವಿಶೇಷ ವಿನ್ಯಾಸದ ನಾಟಕ. ತಮಿಳಿನ ಶಿಲಪ್ಪದಿಕಾರಂನಲ್ಲಿ ಇರುವಂತೆ ಇಲ್ಲಿ ಲೇಖಕನೂ ಒಬ್ಬ ಪಾತ್ರಧಾರಿ. ತಮಿಳಿನ ಮಹಾಕಾವ್ಯಗಳ ಬಗ್ಗೆ ಎಚ್.ಎಸ್.ಶಿವಪ್ರಕಾಶ್ ಬರೆದ ನಂತರ ಯಾರೂ ಕೂಡ ನಾಟಕ ಬರೆದಿಲ್ಲ. ಆ ನಂತರ ಅಣತಿಯವರೇ ನಾಟಕ ಬರೆದಿದ್ದಾರೆ ಎಂಬುದು ಗಮನಾರ್ಹ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net