ಹೆಣ್ಣನ್ನು ಪೂಜ್ಯ ಭಾವನೆಯಿಂದ ಗೌರವಿಸಿ

11 nrp 2
ಸುಂಕದಕಟ್ಟೆಯಲ್ಲಿ ನಡೆದ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಜಯಮ್ಮ ಉದ್ಘಾಟಿಸಿದರು. ಎಚ್.ಎಸ್.ಪೂರ್ಣೇಶ್, ಜುಬೇದಾ, ಭಾಗ್ಯಾ ನಂಜುಂಡಸ್ವಾಮಿ,ಶೃತಿ ಗುರುಶಾಂತಪ್ಪ, ನಾಗರಾಜ್ ಅಪ್ಪಾಜಿ ಇದ್ದರು.
Published on

ಎನ್.ಆರ್.ಪುರ: ಹೆಣ್ಣು ತಾಯಿಯಾಗಿ, ಮಗಳಾಗಿ, ಸೊಸೆಯಾಗಿ, ಅತ್ತೆಯಾಗಿ ಹೀಗೆ ನಾನಾ ವಿಧವಾಗಿ ಸಂಸಾರದಲ್ಲಿ ತನ್ನ ಪಾತ್ರ ನಿರ್ವಹಿಸುತ್ತಾಳೆ. ಹೀಗಾಗಿ ಹೆಣ್ಣನ್ನು ಭೂಮಿಗೆ ಹೋಲಿಸಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಪೂರ್ಣೇಶ್ ಹೇಳಿದರು.
ಸುಂಕದಕಟ್ಟೆ ಯಲ್ಲಿ ಕಸಾಪ ಕಸಬಾ ಹೋಬಳಿ ಘಟಕ ಆಯೋಜಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಸಂಸಾರ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ವಿಶೇಷ ಉಪನ್ಯಾಸ ನೀಡಿ, ಹೆಣ್ಣನ್ನು ಪೂಜ್ಯ ಭಾವನೆಯಿಂದ ಗೌರವಿಸುವ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು. ನಮ್ಮ ಹುಟ್ಟು ನಿಶ್ಚಿತ ಸಾವು ಖಚಿತ. ದೇವರ ಕರೆ ಬಂದಾಗ ನಮ್ಮ ಸ್ವಂತ ಮನೆಗೆ ಹೋಗಬೇಕು. ಇಲ್ಲಿರುವ ಸಮಯದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ಗೆ ಜಾತಿ ಬೇಧವಿಲ್ಲ. ಎಲ್ಲ ಜಾತಿ, ಧರ್ಮದಲ್ಲೂ ಕನ್ನಡ ಸಾಹಿತ್ಯಾಸಕ್ತರಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಕಾರ್ಯವನ್ನು ಕಸಾಪ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಸಬಾ ಹೋಬಳಿ ಘಟಕದ ಅಧ್ಯಕ್ಷೆ ಜುಬೇದಾ ಮಾತನಾಡಿ, ಈ ಬಾರಿ ಶ್ರಾವಣ ಸಂಜೆ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸುವುದರಲ್ಲಿ ನಮ್ಮ ತಾಲೂಕು ಹೆಸರುವಾಸಿಯಾಗಿದೆ. ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದರು.
ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಾ ನಂಜುಂಡಸ್ವಾಮಿ, ಕಸಬಾ ಹೋಬಳಿ ಪ್ರಧಾನ ಕಾರ್ಯದರ್ಶಿ ನಾಗರಾಜ್ ಅಪ್ಪಾಜಿ, ಸಂಘಟನಾ ಕಾರ್ಯದರ್ಶಿ ಎಸ್.ಡಿ.ಶೃತಿ ಗುರುಶಾಂತಪ್ಪ, ಪಿ.ಸಿ.ಮ್ಯಾಥ್ಯು, ಅವಿನಾಶ್, ಜೇಸಿ ಸಂಸ್ಥೆ ಅಧ್ಯಕ್ಷ ಗಂಗಾಧರ, ಶಶಿಕಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net