ಪ್ರವಾಸಿಗರಿಗೆ ಗೌರವ ಕೊಡಿ

bkd protest
ಸಿಗಂದೂರಿಗೆ ಆಗಮಿಸುವ ಪ್ರವಾಸಿಗರನ್ನು ಅಗೌರವದಿಂದ ಕಾಣಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾ ರೈತ ಸಂಘ (ಗಣಪತಿಯಪ್ಪ ಬಣ)ದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ದಿನೇಶ್ ಶಿರವಾಳ, ಮಂಜಪ್ಪ, ಜಾಕಿ ಗಣೇಶ್, ಮಹೇಶ್, ರಮೇಶ್ ಕೆಳದಿ ಇತರರಿದ್ದರು.
Published on

ಬ್ಯಾಕೋಡು: ಸಿಗಂದೂರಿಗೆ ಆಗಮಿಸುವ ಪ್ರಯಾಣಿಕರನ್ನು ಲಾಂಚ್ ಸಿಬ್ಬಂದಿ ಮತ್ತು ಖಾಸಗಿ ವಾಹನ ಚಾಲಕರು ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ರೈತ ಸಂಘ (ಗಣಪತಿಯಪ್ಪ ಬಣ)ದ ಪದಾಧಿಕಾರಿಗಳು ಸೋಮವಾರ ಕಳಸವಳ್ಳಿ ಲಾಂಚ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ರೈತ ಮುಖಂಡ ದಿನೇಶ್ ಶಿರವಾಳ ನೇತೃತ್ವದ ಮೂವತ್ತು ಜನ ರೈತರ ತಂಡ ಕಳಸವಳ್ಳಿ ಲಾಂಚ್ ನಿಲ್ದಾಣದಲ್ಲಿ ಸಭೆ ಸೇರಿದ್ದರು. ಸಿಬ್ಬಂದಿ ರೈತ ನಾಯಕರನ್ನು ಅವಮಾನಿಸಿದ್ದು ತಪ್ಪು. ರಾಜ್ಯದ ಮೂಲೆ ಮೂಲೆಯಿಂದ ಆಗಮಿಸುವ ಪ್ರವಾಸಿಗರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡ ಮಂಜಪ್ಪ ಮಾತನಾಡಿ, ಲಾಂಚ್ ಪ್ರಯಾಣ ಮಾಡಿ ದ್ವೀಪಕ್ಕೆ ಆಗಮಿಸುವ ಪ್ರವಾಸಿಗರಿಗೆ ಭದ್ರತೆ ಕೊರತೆಯಿದ್ದು ದಬ್ಬಾಳಿಕೆ ಪ್ರವೃತ್ತಿ ಮುಂದುವರಿದಿದೆ ಎಂದು ಆರೋಪಿಸಿದರು.

ಲಾಂಚ್ ನಿಲ್ದಾಣದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲು ಸೂಕ್ತ ವ್ಯವಸ್ಥೆ ಇಲ್ಲದಿರುವುದು ಘಟನೆಗೆ ಮೂಲ ಕಾರಣ. ನಿಲ್ದಾಣಗಳಿಗೆ ಭದ್ರತಾ ಸಿಬ್ಬಂದಿ ನೇಮಕ ಮಾಡಿಲ್ಲ. ದ್ವೀಪದ ಪೊಲೀಸ್ ಸ್ಟೇಷನ್‌ನಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಪ್ರತಿಭಟನಾಕಾರರು ದೂರಿದರು.

ಆನಂತರ ವಾಹನ ಚಾಲಕರು ಮತ್ತು ರೈತ ಸಂಘಟನೆ ಮುಖಂಡರ ನಡುವೆ ಸಂಧಾನ ಸಭೆ ನಡೆಯಿತು. ವಾಹನ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸಂತೋಷ್‌ಕುಮಾರ್ ಶೆಟ್ಟಿ ಕ್ಷಮೆ ಕೋರಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಮುಖಂಡರಾದ ಮಂಜಯ್ಯ ಜೈನ್, ಜಾಕಿ ಗಣೇಶ್, ಪಟಾಕಿ ಮಹೇಶ್, ರೈತ ಮುಖಂಡರಾದ ರಮೇಶ್ ಕೆಳದಿ, ರಾಮಚಂದ್ರಪ್ಪ, ಕೆಡಿಪಿ ಸದಸ್ಯ ಜಿ.ಟಿ.ಸತ್ಯನಾರಾಯಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net