

Rakhi Sawant: ವಿವಾದಗಳ ರಾಣಿ ಎಂದೇ ಕರೆಯಲ್ಪಡುವ ಬಾಲಿವುಡ್ನ ಹಾಟ್ ಬೆಡಗಿ ರಾಖಿ ಸಾವಂತ್, ಒಂದಲ್ಲ ಒಂದು ವಿಷಯಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವ್ಯಾಪಕ ಟೀಕೆ, ಚರ್ಚೆಗೆ ಗುರಿಯಾಗುತ್ತಾರೆ. ತನ್ನ ವಿವಾದಾತ್ಮಕ ಹೇಳಿಕೆ, ನಡೆಯಿಂದ ಟ್ರೋಲ್ಗಳಿಗೆ ಸುಲಭವಾಗಿ ಆಹಾರವಾಗುವ ರಾಖಿ, ವೈಯಕ್ತಿಕ ಜೀವನದಿಂದಲೂ ಬೇಸತ್ತು ಹೋಗಿದ್ದಾರೆ. ಮಾಜಿ ಪತಿ ಆದಿಲ್ ಜತೆಗಿನ ವಿಚ್ಛೇದನ ಬಳಿಕ ಜೀವನದಲ್ಲಿ ಮತ್ತಷ್ಟು ಕುಗ್ಗಿರುವ ರಾಖಿ ಸಾವಂತ್, ಸದ್ಯ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಟ್ರೋಲ್, ಟೀಕೆಗೆ ಗುರಿಯಾಗದೆ, ಎಲ್ಲಿಯೂ ಕಾಣಿಸಿಕೊಳ್ಳದ ನಟಿ, ಮೌನಕ್ಕೆ ಶರಣಾಗಿದ್ದಾರೆ. ಹಾಟ್ ಬ್ಯೂಟಿ ಬಗ್ಗೆ ಇಷ್ಟು ದಿನವಿಲ್ಲದ ಮಾತು ಈಗ ದಿಢೀರ್ ರಾಮ್ ಕಪೂರ್ ಅವರಿಂದ ಬಂದಿರುವುದು ಬಿಟೌನ್ ಮಂದಿಯ ಹುಬ್ಬೇರಿಸಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿದ ರಾಮ್ ಕಪೂರ್, "ಯಾವುದೇ ಗಾಡ್ಫಾದರ್ ಇಲ್ಲದೆ ರಾಖಿ ಸಾವಂತ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾಳೆ. ಇಂದು ಮುಂಬೈನಲ್ಲಿ ಸಮುದ್ರ ದಿಕ್ಕಿನ ಕಡೆ 3 ಬಿಎಚ್ಕೆ ಫ್ಲಾಟ್ ಖರೀದಿ ಮಾಡಿದ್ದಾಳೆ. ಯಾರ ನೆರವನ್ನು ಸಹ ಬಯಸದೆ, ತನ್ನ ದುಡಿಮೆ ನಂಬಿ ಬದುಕುತ್ತಿರುವ ವ್ಯಕ್ತಿ. ಇಂದು ಇಷ್ಟೆಲ್ಲ ಮಾಡಿಕೊಂಡಿರುವುದು ತನ್ನ ಶ್ರಮದಿಂದಲೇ. ಇದನ್ನು ಖಂಡಿತ ನಾವು ಗೌರವಿಸಬೇಕು. ಇಂಡಸ್ಟ್ರಿಯಲ್ಲಿ ಯಾರ ಸಂಪರ್ಕವು ಇಟ್ಟುಕೊಳ್ಳದೆ ರಾಖಿ ಈ ಹಂತಕ್ಕೆ ಬೆಳೆದಿರುವುದು ನಿಜಕ್ಕೂ ಖುಷಿಯ ಸಂಗತಿ, ಆದ್ರೆ, ಆಕೆಯ ಕೆಲವು ಅಭಿಪ್ರಾಯಗಳನ್ನು ನಾನು ಒಪ್ಪಲ್ಲ" ಎಂದಿದ್ದಾರೆ.
"ಇಂದು ಇಡೀ ದೇಶಕ್ಕೆ ರಾಖಿ ಸಾವಂತ್ ಹೆಸರು ಗೊತ್ತಿದೆ. ಆಕೆ ಮಾಡಿರುವ ಸಾಧನೆಯನ್ನಷ್ಟೇ ನಾನು ಗೌರವಿಸುವೆ. ಇದನ್ನು ಹೊರತುಪಡಿಸಿ ಆಕೆಯ ಅಭಿಪ್ರಾಯ, ಹುಚ್ಚುತನದ ಮಾತುಗಳನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಬಾಲಿವುಡ್ನಲ್ಲಿ ಹಾಟ್ ಡ್ಯಾನ್ಸರ್ ಆಗಿ ಮಿಂಚಿದ ಈಕೆಯನ್ನು ನೀವೇಕೆ ಗೌರವಿಸಲು ಹಿಂದೇಟು ಹಾಕ್ತೀರಿ? ಉತ್ತುಂಗದಲ್ಲಿದ್ದ ರಾಖಿಯನ್ನು ಬಾಲಿವುಡ್ ದುರುಪಯೋಗ ಪಡಿಸಿಕೊಳ್ಳಲು ಯತ್ನಿಸಿತು" ಎಂದು ದೂರಿದ್ದಾರೆ. ಸದ್ಯ ರಾಮ್ ಕಪೂರ್ನ ಈ ಹೇಳಿಕೆಗಳು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಹಲವರು ಹಲವು ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).