

ಕೇಂದ್ರ ಸರ್ಕಾರದ ವಿವಿಧ ಇಲಾಖೆ, ಸಚಿವಾಲಯಗಳ ಎಂಟಿಎಸ್ (ಮಲ್ಟಿ ಟಾಸ್ಕಿಂಗ್ ಸ್ಟಾಫ್) ಹುದ್ದೆಗಳ ಭರ್ತಿಗೆ ಸಿಬ್ಬಂದಿ ಆಯ್ಕೆ ಆಯೋಗದ (ಎಸ್ಎಸ್ಸಿ) ಮೂಲಕ ನಡೆಸಲಾಗುವ ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲೂ ಬರೆಯುವುದಕ್ಕೆ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಸಮ್ಮತಿಸಿರುವುದು ಸಮಾಧಾನಕರ. ಮೊದಲು, ಈ ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬರೆಯಲು ಮಾತ್ರ ಅವಕಾಶ ಕಲ್ಪಿಸಿ, ಅಧಿಸೂಚನೆ ಹೊರಡಿಸಲಾಗಿತ್ತು. ಈ ವಿದ್ಯಮಾನದ ಕುರಿತಂತೆ ‘ವಿಜಯವಾಣಿ’ ಗುರುವಾರ ಮುಖಪುಟ ವರದಿಯನ್ನು ಪ್ರಕಟಿಸಿತ್ತು. ಎಸ್ಎಸ್ಸಿ ದಶಕಗಳ ಹಿಂದೆ ಕಾನ್ಸ್ಟೆಬಲ್ ಹುದ್ದೆಗೆ ಕನ್ನಡದಲ್ಲಿ ಪರೀಕ್ಷೆ ನಡೆಸಿತ್ತು. ಆ ಬಳಿಕ ಈ ಕ್ರಮಕ್ಕೆ ತಿಲಾಂಜಲಿ ನೀಡಿತ್ತು. ಪರಿಣಾಮ, ಕನ್ನಡಿಗರು ಇತರ ರಾಜ್ಯದ ಆಕಾಂಕ್ಷಿಗಳೊಂದಿಗೆ ಪೈಪೋಟಿ ನಡೆಸುವುದು ಕಷ್ಟವಾಗಿ ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದರು. ಕೆಳಹಂತದ ಹುದ್ದೆಗಳಿಗೆ ಕನ್ನಡದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂಬ ಬೇಡಿಕೆ ಇಂದು-ನಿನ್ನೆಯದೇನಲ್ಲ.
ಈ ಹಿಂದೆ ಕಾರ್ವಿುಕರ ರಾಜ್ಯ ವಿಮಾ ನಿಗಮದ (ಇಎಸ್ಐಸಿ), ರಾಜ್ಯದಲ್ಲಿಯೇ ಕಾರ್ಯ ನಿರ್ವಹಿಸಬೇಕಾದ ಹಾಗೂ ಇತರ ಕೆಳಹಂತದ ಹುದ್ದೆಗಳಿಗೆ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಇದಕ್ಕೆ ಭಾರಿ ವಿರೋಧ ವ್ಯಕ್ತವಾದ ಬಳಿಕ ಕನ್ನಡದಲ್ಲೂ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿತ್ತು. ಕೆಲ ರಾಷ್ಟ್ರೀಕೃತ ಬ್ಯಾಂಕಿಂಗ್ ಪರೀಕ್ಷೆ ವಿಚಾರದಲ್ಲಿ ಕೂಡ ಪ್ರಾದೇಶಿಕ ಭಾಷಾ ಅವಕಾಶದ ಬಗ್ಗೆ ಬೇಡಿಕೆಯಿದ್ದು, ಸರ್ಕಾರಗಳು ಗಮನಹರಿಸಬೇಕಿದೆ. ಅಲ್ಲದೆ, ಪ್ರಾದೇಶಿಕ ಭಾಷೆಯಲ್ಲಿ ಒಂದೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಿದರೂ ತಪು್ಪ ಅನುವಾದ ಅಥವಾ ತಪು್ಪ ಪ್ರಶ್ನೆಪತ್ರಿಕೆ ಮೂಲಕ ಅಭ್ಯರ್ಥಿಗಳು ಪರದಾಡುವಂತಾಗಿದೆ. ಇಂಥ ಅಪಸವ್ಯಗಳನ್ನು ನಿವಾರಿಸದೆ ಪರೀಕ್ಷಾ ಪದ್ಧತಿಯ ಸುಧಾರಣೆ, ನೇಮಕಾತಿಯಲ್ಲಿ ಪಾರದರ್ಶಕ ವ್ಯವಸ್ಥೆ ತರಲು ಹೇಗೆ ತಾನೆ ಸಾಧ್ಯ?
ಕೇಂದ್ರ ಸರ್ಕಾರದ ಯಾವುದೇ ಸ್ಪರ್ಧಾತ್ಮಕ ಅಥವಾ ವಿವಿಧ ಇಲಾಖಾ ಪರೀಕ್ಷೆಗಳನ್ನು ಆಯಾ ಪ್ರಾದೇಶಿಕ ಭಾಷೆಗಳಲ್ಲೂ ಬರೆಯುವ ಅವಕಾಶ ಇರಬೇಕು ಎಂಬ ಕೂಗು ಈಚಿನ ವರ್ಷಗಳಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದೆ. ಆಕಾಂಕ್ಷಿ ಅಭ್ಯರ್ಥಿಗಳಿಗೆ ಸಮಾನ ವೇದಿಕೆಯನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಇಂಥ ನೀತಿ ಅಗತ್ಯ ಎಂಬುದು ಇದರ ಹಿಂದಿರುವ ಕಳಕಳಿ. ಅದಿಲ್ಲವಾದಲ್ಲಿ ಹಿಂದಿ ಅಥವಾ ಇಂಗ್ಲಿಷ್ ಹಿಡಿತ ಇರುವವರು ಮಾತ್ರ ಹೆಚ್ಚೆಚ್ಚು ಹುದ್ದೆಗಳನ್ನು ಗಿಟ್ಟಿಸಿಕೊಳ್ಳುತ್ತ ಪ್ರಾದೇಶಿಕ ಸಮಾನತೆಯೆಂಬುದು ಮರೀಚಿಕೆಯಾಗುತ್ತದೆ. ಯಾವುದೇ ದೇಶ ಅಭಿವೃದ್ಧಿ ಹೊಂದಬೇಕಾದಲ್ಲಿ ಅಲ್ಲಿ ಬೆಳವಣಿಗೆಯೆಂಬುದು ಆದಷ್ಟು ಏಕಪ್ರಕಾರವಾಗಿರಬೇಕಾಗುತ್ತದೆ. ಅಂದರೆ ಪ್ರಾದೇಶಿಕ ಸಮತೋಲನ ಇರಲೇ ಬೇಕು. ಇದು ಸರ್ಕಾರಿ ಉದ್ಯೋಗಗಳಿಗೂ ಅನ್ವಯವಾಗುವಂಥದ್ದು. ಈ ನಿಟ್ಟಿನಲ್ಲಿ ಅವಕಾಶವಿದ್ದಲ್ಲಿ ಕಾಲಕಾಲಕ್ಕೆ ಸರ್ಕಾರಿ ನೀತಿನಿಯಮಗಳಲ್ಲಿ ಬದಲಾವಣೆ ಅಥವಾ ತಿದ್ದುಪಡಿ ತರುವುದು ಅಗತ್ಯ. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾಷೆಗಳ ಅಸ್ಮಿತೆ ಕಾಪಾಡುವುದು ಮುಖ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು ಮತ್ತು ಮತ್ತು ಜನರ ಭಾವನೆಗಳನ್ನು ಗೌರವಿಸಬೇಕು.