

ತೀರ್ಥಹಳ್ಳಿ: ಭಯೋತ್ಪಾದನೆ ನಿಗ್ರಹಕ್ಕೆ ಪ್ರತಿಯೊಬ್ಬ ಪ್ರಜೆಯೂ ಭಾರತದ ಪರ ನಿಲ್ಲುವ ಮೂಲಕ ಹೊಸ ಭಾಷ್ಯ ಬರೆಯಬೇಕು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ದೇಶದ ಯೋಧರಿಗೆ ನೈತಿಕ ಬಲ ತುಂಬುವ ಸಲುವಾಗಿ ನಾಗರಿಕ ವೇದಿಕೆಯಿಂದ ಮಂಗಳವಾರ ಪಟ್ಟಣದಲ್ಲಿ ಆಯೋಜಿಸಿದ್ದ ವಿಜಯ ಸಿಂಧೂರ ತಿರಂಗಾ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಾಕಿಸ್ತಾನದ ಅಣುಬಾಂಬ್ ಸೇರಿ ಯಾವ ಬೆದರಿಕೆಗೂ ಬಗ್ಗುವುದಿಲ್ಲ ಎಂಬುದನ್ನು ಈ ಯುದ್ಧ ನಿರೂಪಿಸಿದೆ. ಏನು ಮಾಡುತ್ತೇವೆ ಎಂಬುದನ್ನು ವಿರೋಧಿಗಳಿಗೆ ಮುಂಚಿತವಾಗಿ ತಿಳಿಸಿಯೇ ಜಗತ್ತಿಗೆ ನಮ್ಮ ಶಕ್ತಿಯನ್ನು ತೋರಿಸಿದ್ದೇವೆ. ದೇಶದ ಹಿತಕ್ಕೆ ವಿರುದ್ಧವಾಗಿ ಮಾತನಾಡುವವರಿಗೆ ನಾವು ಉತ್ತರ ನೀಡುವ ಬದ್ಧತೆ ತೋರಬೇಕಿದೆ ಎಂದರು.
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ. ಈ ಯುದ್ಧದಲ್ಲಿ ನಮಗೆ ಹೆಚ್ಚಿನ ಹಾನಿ ಆಗಿಲ್ಲ ಎಂದು ಸೇನಾ ಮುಖ್ಯಸ್ಥರು ಹೇಳಿದ್ದರೂ ರಾಹುಲ್ ಗಾಂಧಿ ಭಾರತ ಕಳೆದುಕೊಂಡಿರುವ ಬಗ್ಗೆ ಲೆಕ್ಕೆ ಕೊಡಿ ಎಂದು ಕೇಳುತ್ತಿದ್ದಾರೆ. ಪಹಲ್ಗಾಮ್ ಘಟನೆಗೆ ಸರ್ಕಾರವೇ ಕಾರಣ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಅಸಾದುದ್ದೀನ್ ಓವೈಸಿ ಸಹ ದೇಶಭಕ್ತಿ ತೋರಿರುವ ಸಂದರ್ಭದಲ್ಲಿ ಈ ಇಬ್ಬರು ನಾಯಕರ ಹೇಳಿಕೆ ಖಂಡನೀಯ ಎಂದು ಹೇಳಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಪಹಲ್ಗಾಮ್‌ನಲ್ಲಿ ಕುಟುಂಬ ಸದಸ್ಯರ ಎದುರಿನಲ್ಲಿ ಧರ್ಮ ಕೇಳಿ ಅಮಾಯಕರ ಹತ್ಯೆ ನಡೆದಿರುವ ಬಗ್ಗೆ ಇಡೀ ದೇಶವೇ ಕಣ್ಣೀರಿಟ್ಟಿದೆ. ಇದಕ್ಕೆ ನಮ್ಮ ಯೋಧರು ತಕ್ಕ ಪ್ರತೀಕಾರವನ್ನು ತೆಗೆದುಕೊಂಡಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಸೈನಿಕರಿಗೆ ಮೂಲ ಸೌಲಭ್ಯವೇ ಇರಲಿಲ್ಲ. ಮನೋಹರ ಪಾರಿಕ್ಕರ್ ರಕ್ಷಣಾ ಸಚಿವರಾದ ನಂತರ ಇಂದು ಭಾರತ ವಿಶ್ವದ ಮೂರನೇ ಅತಿ ದೊಡ್ಡ ಸೇನೆಯಾಗಿದೆ. ದೇಶದಲ್ಲಿ ನಿರ್ಮಾಣವಾಗುವ ಶಸಾಸಗಳು ರ‌್ತಾಗುತ್ತಿವೆ. ಬೊಕ್ಕಸಕ್ಕೆ ಕೊಟ್ಯಂತರ ರೂ. ಆದಾಯವೂ ಬರುವಂತಾಗಿದೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಆಗುಂಬೆ ವೃತ್ತದಿಂದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಆರ್‌ಎಸ್‌ಎಸ್‌ನ ದಿನೇಶ್ ಭಾರತಿಪುರ, ಮಾಜಿ ಯೋಧ ಪ್ರದೀಪ್ ಶಿರೂರು, ಹೆದ್ದೂರು ನವೀನ್ ಇತರರಿದ್ದರು.