

ನಂಜನಗೂಡು: ಸಾರ್ವಜನಿಕರಿಂದ ಕೇಳಿಬಂದಿರುವ ದೂರುಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥ ಮಾಡುವಂತೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನಸ್ಪಂದನ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ 90 ಅರ್ಜಿಗಳು ಸ್ವೀಕೃತಗೊಂಡಿದ್ದು, ಸಂಬಂಧಿಸಿದ ಇಲಾಖೆಗಳಿಗೆ ರವಾನೆ ಮಾಡಲಾಗುವುದು. ಆಯಾ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಿದ ಅವರು, ಪ್ರಕರಣಗಳ ಕುರಿತು ಆಯಾ ಇಲಾಖೆಯ ಹಿರಿಯ ಅಧಿಕಾರಿಗಳು ವಾರಕ್ಕೊಮ್ಮೆ ಪರಿಶೀಲನೆ ನಡೆಸುವಂತೆ ಆದೇಶಿಸಿದರು.
ನಕಲಿ ಸಹಿ ಮಾಡಿಸಿಕೊಂಡು ಆಸ್ತಿ ಕಬಳಿಕೆ ಮಾಡಲು ಮುಂದಾದವರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ನಮಗೆ ನ್ಯಾಯ ಸಿಗದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮಗೆ ನ್ಯಾಯ ಸಿಗುವ ಭರವಸೆ ಇಲ್ಲದ ಕಾರಣ ನಮ್ಮ ಕುಟುಂಬಕ್ಕೆ ದಯಾ ಮರಣವನ್ನು ನೀಡಿ ಎಂದು ತಾಲೂಕಿನ ಕಾಳಿಹುಂಡಿ ಗ್ರಾಮದ ಯುವ ರೈತ ಮಹದೇವಸ್ವಾಮಿ ಜಿಲ್ಲಾಧಿಕಾರಿಗಳಿಗೆ ಪತ್ರ ನೀಡಿ ಅಳಲು ತೋಡಿಕೊಂಡರು.
ವ್ಯಕ್ತಿಯೊಬ್ಬರು ನನ್ನ ಹಾಗೂ ತಮ್ಮನ ಸಹಿಯನ್ನು ನಕಲು ಮಾಡಿ ಸಿಂಧುವಳ್ಳಿ ಗ್ರಾಮದ ಸರ್ವೆ ನಂ.174/1ರ ಆಸ್ತಿಯ ಆರ್‌ಟಿಸಿ ಇಂಡೀಕರಣ ಮಾಡಿ ಕಬಳಿಸಲು ಮುಂದಾಗಿದ್ದಾನೆ. ಈ ಕೃತ್ಯಕ್ಕೆ ನಂಜನಗೂಡಿನ ತಾಲೂಕು ಕಚೇರಿಯ ಅಧಿಕಾರಿಗಳು ಕೂಡ ಸಹಕಾರ ನೀಡಿದ್ದಾರೆ. ಈ ಬಗ್ಗೆ ದೂರು ನೀಡದರೂ ಕೂಡ ನ್ಯಾಯಸಿಕ್ಕಿಲ್ಲ. ವಂಚನೆ ದೌರ್ಜನ್ಯವನ್ನು ನಮಗೆ ಸಹಿಸಲು ಆಗುತ್ತಿಲ್ಲ. ಆದ್ದರಿಂದ ನಮ್ಮ ಇಡೀ ಕುಟುಂಬಕ್ಕೆ ದಯಾಮರಣ ನೀಡಿ ಎಂದು ಅರ್ಜಿ ನೀಡಿದರು.
ಜನಸಂಗ್ರಾಮ ಪರಿಷತ್‌ನ ನಗರ್ಲೆ ವಿಜಯ್‌ಕುಮಾರ್ ಮಾತನಾಡಿ, ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿ ನಕಲಿ ದಾಖಲೆ ಸೃಷ್ಟಿಸಿದ ಪ್ರಕರಣದಲ್ಲಿ ಆರ್‌ಐ ಪ್ರಕಾಶ್, ಶಿರಸ್ತೆದಾರ್ ಶ್ರೀನಾಥ್ ಮತ್ತು ಗ್ರಾಮಲೆಕ್ಕಿಗ ಮಂಜುನಾಥ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇಲಾಖೆ ಶ್ರೀನಾಥ್ ಮತ್ತು ಮಂಜುನಾಥ್ ಮೇಲೆ ಕ್ರಮ ಕೈಗೊಂಡಿದೆ. ಆರ್.ಐ. ಪ್ರಕಾಶ್ ತಮ್ಮ ಪ್ರಭಾವ ಬಳಸಿ ಕೆಲಸದಲ್ಲಿ ಮುಂದುವರಿದಿದ್ದು, ಈತನ ಮೇಲೂ ಕಾನೂನು ಕ್ರಮ ಜರುಗಿಸಿ ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.
ತಾಲೂಕಿನ ಕಳಲೆ ಗ್ರಾಮದಲ್ಲಿ ಖಾಸಗಿ ಶಾಲೆಯೊಂದು ಮೂಲಸೌಕರ್ಯ ಕಲ್ಪಿಸದೆ ಹಾಗೂ ಪರವಾನಗಿ ಪಡೆಯದೆ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆ ಮೇಲೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಶಂಕರಪುರ ಸುರೇಶ್ ಮಾತನಾಡಿ, ಪಟ್ಟಣದಲ್ಲಿ ಅಂಗಡಿ ಮಾಲೀಕರು ಫುಟ್‌ಪಾತ್ ಆಕ್ರಮಣ ಮಾಡಿಕೊಂಡಿದ್ದು, ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ದೂರಿದರು.
ಹುಸ್ಕೂರು ಗ್ರಾಮದ ಪ್ರದೀಪ್ ಮಾತನಾಡಿ, ಮೈಸೂರು ಜಿಲ್ಲೆಯಾದ್ಯಂತ ಖಾಸಗಿ ಸ್ಕಾೃನಿಂಗ್ ಸೆಂಟರ್‌ಗಳು ಹೆಚ್ಚಾಗಿ ತಲೆ ಎತ್ತುವ ಜತೆಗೆ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿವೆ. ಸರ್ಕಾರಿ ಸ್ಕಾೃನಿಂಗ್ ಸೆಂಟರ್ ಹಾಗೂ ಔಷಧ ಅಂಗಡಿ ತೆರೆಯಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಬೊಕ್ಕಹಳ್ಳಿ ನಂಜುಂಡಸ್ವಾಮಿ ಮಾತನಾಡಿ, ನಂಜನಗೂಡು, ತಾಂಡ್ಯ, ಅಡಕನಹಳ್ಳಿಹುಂಡಿ ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ, ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಉದ್ಯೋಗ ನೀಡದೆ ವಂಚಿಸಿದೆ ಈ ಬಗ್ಗೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ನಗರದಲ್ಲಿ ಕಳ್ಳತನ, ಕೊಲೆ ಪ್ರಕರಣ ಹೆಚ್ಚಾಗಿದೆ. ಸಿಎಂ ತವರು ಕ್ಷೇತ್ರದಲ್ಲೇ ಅಕ್ರಮ ಮದ್ಯ ಮಾರಾಟ ಯಥೇಚ್ಛವಾಗಿದೆ, ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಸಾಲು ಸಾಲು ದೂರು ಕೇಳಿ ಬಂದವು.
ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಮಾತನಾಡಿ, ಸಭೆಯಲ್ಲಿ ಸುಮಾರು 89 ಅರ್ಜಿಗಳು ಬಂದಿವೆ. ಈಗಾಗಲೇ ಕೆಲವೊಂದಕ್ಕೆ ಪರಿಹಾರ ನೀಡಲಾಗಿದೆ. ಇನ್ನುಳಿದ ಅರ್ಜಿಗಳ ಪ್ರಗತಿಯನ್ನು ಪರಿಶೀಲನೆಗೊಳಪಡಿಸಿ ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು. ಎಲ್ಲ ಇಲಾಖೆಯ ಅಧಿಕಾರಿಗಳು ಜಾಗೃತಿಯಿಂದ ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ಜಿಪಂ ಸಿಇಒ ಗಾಯತ್ರಿ, ಉಪ ಕಾರ್ಯದರ್ಶಿ ಕೃಷ್ಣಂರಾಜು, ಎಡಿಸಿ ಶಿವರಾಜು, ಉಪ ವಿಭಾಗಾಧಿಕಾರಿ ರಕ್ಷಿತ್, ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ತಾಪಂ ಇಒ ಜೆರಾಲ್ಡ್ ರಾಜೇಶ್, ಡಿವೈಎಸ್ಪಿ ಜಿ.ಎಸ್. ರಘು, ನಗರಸಭಾ ಆಯುಕ್ತ ನಂಜುಂಡಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ಭೀಮರಾವ್ ವಡ್ಡಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.