

ಸೊರಬ: ತಾಲೂಕಿನ ಕತವಾಯಿ ಗ್ರಾಮದಲ್ಲಿ ಗ್ರಾಮಸ್ಥರು ಪ್ರಾಚೀನ ಶಿವ ದೇವಾಲಯದ ಜೀರ್ಣೋದ್ಧಾರ ಸಂಕಲ್ಪ ಮಾಡಿದ್ದು, ಸಾಂಪ್ರದಾಯಿಕ ಕಲಾಸಂಕೋಚದ ಮೂಲಕ ಹಳೆಯ ಗುಡಿ ತೆರವು ಮಾಡಿದರು.
ಗ್ರಾಮಸ್ಥರು ಗುಡಿಯ ಪುನರುತ್ಥಾನಕ್ಕೆ ಮುಂದಾಗಿದ್ದಾರೆ. ಗುಡಿಯ ಮಾಡನ್ನು ಸಂಪ್ರದಾಯದಂತೆ ಎತ್ತುಗಳ ಮೂಲಕ ಇಳಿಸುವ ಪದ್ಧತಿ ಅನುಸರಿಸಿದರು. ಗುಡಿಯ ಆವರಣ ಸ್ವಚ್ಛಗೊಳಿಸಿ, ಶಿವಲಿಂಗವನ್ನು ಪೂಜಿಸಿ ಕಲಾಸಂಕೋಚ ನೆರವೇರಿಸಿದರು. ಗುಡಿಯ ಆವರಣದಲ್ಲಿ 17ನೇ ಶತಮಾನದ ವೀರಗಲ್ಲು ಇದ್ದು, ಶಿವಲಿಂಗ ಕೂಡ ಇದೇ ಶತಮಾನದ್ದು ಎನ್ನಲಾಗಿದೆ. ಜಂಬಿಟ್ಟಿಗೆ ಬಳಸಿ ಗೋಡೆ ಕಟ್ಟಲಾಗಿದ್ದು, ಇದೀಗ ಶಿಥಿಲವಾಗಿದೆ. ವಿಜಯನಗರದ ಅರಸರ ಅವಧಿಯ ಗುಡಿಗಳು, ಕೆಲವು ಕದಂಬರ ಕಾಲದ ಜಂಬಿಟ್ಟಿಗೆ ಬಳಸಿದ ಗುಡಿಗಳ ಅವಶೇಷಗಳು ಕೂಡ ತಾಲೂಕಿನಲ್ಲಿ ಪತ್ತೆಯಾಗಿವೆ. ಆದರೆ ಈ ದೇಗುಲದ ಗೋಡೆ ನಂತರದಲ್ಲಿ ಕಟ್ಟಲಾಗಿದೆ.
ಗ್ರಾಮ ಸಮಿತಿ ಅಧ್ಯಕ್ಷ ರಘುಪತಿ ಸಂಗೇರ್, ಉಪಾಧ್ಯಕ್ಷ ಕೆರಿಯಪ್ಪ ಬಡಿಗೇರ್, ಕಾರ್ಯದರ್ಶಿ ನಾಗರಾಜ್ ನಾಯ್ಕ, ಸಮಿತಿ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.