

ಬೆಂಗಳೂರು: ಕಾಂಗ್ರೆಸ್ ಸೂಚನೆಗೂ ಮೊದಲೇ ತಾವೇ ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಿ ಎಂದು ಜೆಡಿಎಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದೆ.
ಮುಡಾವನ್ನು ಮುಕ್ಕಿ ತಿಂದಿರುವ ಮುಡಾರಾಮಯ್ಯ ತಮ್ಮ ಅಕ್ರಮಗಳು ಹೊರಬರುತ್ತಿದ್ದಂತೆ ರಾಜ್ಯದ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಹೊಸ ಸದಾರಮೆ ನಾಟಕ ಶುರು ಮಾಡಿದ್ದಾರೆ ಎಂದು ಲೇವಡಿ ಮಾಡಿದೆ.
ಸಿದ್ದರಾಮಯ್ಯನವರ ಧರ್ಮಪತ್ನಿಯವರು ಯಾವುದೇ ತಪ್ಪು ಮಾಡಿಲ್ಲ. ಆದರೆ, ಪತ್ನಿ ಹೆಸರಲ್ಲಿ ಅಕ್ರಮವಾಗಿ ಸೈಟು ಕಬಳಿಸಿದ ಸಿದ್ಧಹಸ್ತರು. ಮುಡಾ ಫೈಲ್ಸ್‌ನ ಕಥೆ, ಚಿತ್ರ ಕಥೆ, ನಿರ್ದೇಶನ ತಮ್ಮದೇ ಅಲ್ಲವೇ? ಎಂದು ಕೆಣಕಿದೆ.
ಗೌರವಯುತವಾಗಿ ಮನೆಯಲ್ಲಿರುವ, ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಆ ತಾಯಿಯ ಹೆಸರನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡದ್ದು ನೀವೇ ಅಲ್ಲವೆ? ನಿವೇಶನ ವಿಚಾರದಲ್ಲಿ ಈಗ ಮೊಸಳೆ ಕಣ್ಣಿರು ಸುರಿಸಲು ನಾಚೀಕೆಯಾಗುವುದಿಲ್ಲವೇ? ಎಂದು ಛೇಡಿಸಿದೆ.
ದಲಿತರನ್ನು ಬಳಸಿಕೊಂಡು ಬಲಿತಿರುವ ನೀವು ವಾಲ್ಮೀಕಿ ನಿಗಮದ ಹಣವನ್ನು ಹೇಗೆಲ್ಲ ಲೂಟಿ ಮಾಡಿದ್ದೀರಿ?, ದಲಿತರ ಜಮೀನು ನುಂಗಿದ್ದೀರಿ, ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಸಾವಿರಾರು ಕೋಟಿ ದುರ್ಬಳಕೆ ಮಾಡಿಕೊಂಡ ಭ್ರಷ್ಟಾತಿಭ್ರಷ್ಟ ಸರ್ಕಾರ ನಿಮ್ಮದು. ಹೆಜ್ಜೆ ಹೆಜ್ಜೆಗೂ ದಲಿತರ ಬೆನ್ನಿಗೆ ಚೂರಿ ಹಾಕುತ್ತಲೇ ಇರುವ ನಿಮಗೆ ದಲಿತರ ಬಗ್ಗೆ ಮಾತಾಡುವ ಯಾವ ನೈತಿಕತೆಯು ಉಳಿದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದೆ.
ಎ1 ಆರೋಪಿ ಭ್ರಷ್ಟರಾಮಯ್ಯ ಅಲುಗಾಡುತ್ತಿರುವ ಸಿಎಂ ಕುರ್ಚಿ ಉಳಿಸಿಕೊಳ್ಳಲು ಹಾಗೂ ಜನರ ಅನುಕಂಪ ಪಡೆಯಲು ಮಾಡುತ್ತಿರುವ ಹೈಡ್ರಾಮಾಗಳಷ್ಟೆ ಎಂದು ಜೆಡಿಎಸ್ ವ್ಯಂಗ್ಯವಾಡಿದೆ.