

ಶಿವಮೊಗ್ಗ: ಬೊಮ್ಮನಕಟ್ಟೆ ಆಶ್ರಯ ಬಡಾವಣೆ ಬಿ ಬ್ಲಾಕ್‌ನಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರ ನೀಡಬೇಕು ಹಾಗೂ ಇಲ್ಲಿರುವ ಪಾರ್ಕ್ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿ ಸರ್ ಎಂ.ವಿಶ್ವೇಶ್ವರಯ್ಯ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಿವಾಸಿಗಳು ಶನಿವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಎ ಮತ್ತು ಬಿ ಬ್ಲಾಕ್‌ನಲ್ಲಿ ಗುಡಿಸಲು ಮತ್ತು ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುವವರಿಗೆ ಸರ್ಕಾರದ ನಿಯಮಾನುಸಾರ ಸರ್ವೇ ಕಾರ್ಯ ಮಾಡಿ ಹಕ್ಕುಪತ್ರ ನೀಡಬೇಕು. ನಗರ ಪಾಲಿಕೆ ನಿವಾಸಿಗಳಿಗೆ ನೋಟೀಸ್ ನೀಡುತ್ತಿದ್ದು, ಹಕ್ಕುಪತ್ರಕ್ಕಾಗಿ ಹಲವು ಬಾರಿ ಹೋರಾಟ ಮಾಡಿದ್ದೇವೆ. ಆದರೂ ಹಕ್ಕುಪತ್ರ ಸಿಕ್ಕಿಲ್ಲ. ಈಗಲಾದರೂ ನಮಗೆ ಹಕ್ಕುಪತ್ರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಿ ಬ್ಲಾಕ್‌ನಲ್ಲಿ ಪಾರ್ಕ್ ಇದ್ದು, 4 ವರ್ಷದ ಹಿಂದೆ ನಿರ್ಮಾಣ ಮಾಡಿದ್ದಾರೆ. ಆದರೆ ಈಗ ಅಲ್ಲಿ ಗಿಡಗಂಟಿಗಳು ಬೆಳೆದು, ಸಂಪೂರ್ಣ ಹಾಳಾಗಿದೆ. ಅನೈತಿಕ ಚಟುವಟಿಕೆಗಳಿಗೂ ಕಾರಣವಾಗಿದೆ. ಕೂಡಲೇ ಈ ಪಾರ್ಕ್ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.
ಸಮಿತಿ ಅಧ್ಯಕ್ಷ ಸಂತೋಷ್ ನಾಯ್ಕ, ತಿಪ್ಪೇಶ್ ನಾಯ್ಕ, ಸ್ಥಳೀಯ ನಿವಾಸಿಗಳಾದ ವಿಶಾಲಾ ಬಾಯಿ, ಗೀತಾ, ಅಂಬಿಕಾ, ಮಂಜಮ್ಮ, ಮಮ್ತಾಜ್, ಪುಷ್ಪಾ, ಸುಮಲತಾ, ಪಾರ್ವತಮ್ಮ ಮುಂತಾದವರಿದ್ದರು.