'ಮೀಸಲು ಸವಲತ್ತು ಉಣ್ಣಲು ಮೊದಲ ಪಂಕ್ತಿಯಲ್ಲಿ ಕುಳಿತವರು ಇನ್ನೂ ಎದ್ದಿಲ್ಲ...'

Karjol 18 MArch 20
Published on

ಬೆಂಗಳೂರು: ಮೀಸಲು ಸವಲತ್ತು ಸಮಾನ ಹಂಚಿಕೆ ಸಾಮಾಜಿಕ ನ್ಯಾಯದ ತಳಹದಿಯಾಗಿದ್ದು, ಮೀಸಲು ಸವಲತ್ತು ಕೆಲವರ ಸ್ವತ್ತಾಗಿದೆ. ಇದರ ಲಾಭ ಪಡೆದವರೇ ಮತ್ತೆ ಮತ್ತೆ ಪಡೆದುಕೊಂಡು ವಂಚಿತರನ್ನು ಹತ್ತಿರಕ್ಕೆ ಸುಳಿಯಲು ಬಿಡುತ್ತಿಲ್ಲವೆಂದು ವಿಧಾನಪರಿಷತ್​ನಲ್ಲಿ ಕಳವಳ ವ್ಯಕ್ತವಾಯಿತು.

ಕ್ರೀಮಿಲೇಯರ್ ತೆಗೆದು ಮೀಸಲು ಪ್ರಮಾಣವನ್ನು ಶೇ.50ಕ್ಕೆ ಮಿತಿಗೊಳಿಸಬೇಕು ಎನ್ನುವುದು ಯಾವ ನ್ಯಾಯ? ಎಂದು ಎಚ್.ಎಂ.ರೇವಣ್ಣ ಕೇಳಿದರು. ಮಧ್ಯೆ ಪ್ರವೇಶಿಸಿದ ಡಿಸಿಎಂ ಗೋವಿಂದ ಕಾರಜೋಳ ಲಭ್ಯ ಮೀಸಲು ಸೌಲಭ್ಯ ಹೇಗೆ ಬಳಕೆಯಾಗುತ್ತಿದೆ ಎನ್ನುವುದರ ಮೇಲೂ ಬೆಳಕು ಚೆಲ್ಲಿ ಎಂದು ಸಲಹೆ ನೀಡಿದರು.

ಪರಿಶಿಷ್ಟ ಜಾತಿಯಲ್ಲಿರುವ ಅನೇಕ ಉಪಜಾತಿಗಳು ಮೀಸಲು ವರ್ಗೀಕರಣಕ್ಕಾಗಿ ಹೋರಾಟ ನಡೆಸಿವೆ. ಆಯಾ ಉಪ ಜಾತಿಗಳ ಬಹುಸಂಖ್ಯಾತರ ಪಾಲಿಗೆ ಮೀಸಲು ಸೀಮಿತವಾಗಿದ್ದು, ಗುಡ್ಡಗಾಡು, ಆದಿವಾಸಿಗಳು, ಅಲೆಮಾರಿ, ಗಿರಿಜನರಿಗೆ ಮೀಸಲು ಪ್ರಯೋಜನ ಪಡೆಯಲು ಸಾಧ್ಯವಾಗಿಲ್ಲವೆಂಬ ಕಟುಸತ್ಯವನ್ನು ಕಾರಜೋಳ ತೆರೆದಿಟ್ಟರು. ಕುರಿ ಕಾಯುತ್ತಾ ಊರೂರು ಅಲೆಯುವ ಜನರನ್ನು ಸುಧಾರಿಸಿದ ಕುರುಬರು ಒಪ್ಪಿಲ್ಲ, ಇದು ನನ್ನ ಗಮನಕ್ಕೆ ಬಂದಿದೆ ಎಂದಾಗ ರೇವಣ್ಣ ಆಕ್ಷೇಪಿಸಿದರು. ಕಾರಜೋಳ ಅಭಿಪ್ರಾಯ ತಳ್ಳಿಹಾಕಿದ ರಘುನಾಥ್ ರಾವ್ ಮಲ್ಕಾಪೂರೆ, ಕುರುಬ ಸಮುದಾಯದಲ್ಲಿ ಯಾವುದೇ ಉಪಪಂಗಡಗಳಿಲ್ಲ, ತಾರತಮ್ಯವಿಲ್ಲ. ಕುರುಬರೆಲ್ಲರೂ ಒಂದೇ ಕಾಗಿನೆಲೆ ನಮ್ಮ ಪೀಠವೆಂದರು. ನನ್ನ ಮಾತನ್ನು ತಪ್ಪಾಗಿ ಗ್ರಹಿಸಬೇಕಾದ ಅಗತ್ಯವಿಲ್ಲ. ಕುರಿ ಕಾಯುವವರ ಜತೆ ಬೀಗಸ್ತನ ಬೆಳೆಸಲು ಹಿಂದೇಟು ಹಾಕುವವರಿದ್ದಾರೆ. ಮಾದಿಗರಲ್ಲೂ ಅದೇ ಕಥೆ. ಇದೇ ಜಾತಿಗೆ ಸೇರಿದ ಸಫಾಯಿ ಕರ್ಮಚಾರಿಗಳ ಜತೆ ಸಂಬಂಧ ಬೆಳೆಸಲು ಮಾದಿಗರು ತಯಾರಿಲ್ಲವೆಂದು ಕಾರಜೋಳ ತಮ್ಮ ನಿಲುವು ಸಮರ್ಥಿಸಿಕೊಂಡರು.

ಆಯನೂರು ಮಂಜುನಾಥ ಮಾತನಾಡಿ, ಮೀಸಲು ಸವಲತ್ತು ಉಣ್ಣಲು ಮೊದಲ ಪಂಕ್ತಿಯಲ್ಲಿ ಕುಳಿತವರು ಇನ್ನೂ ಎದ್ದಿಲ್ಲ. ತಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳಿಗೆ ಇದನ್ನು ಹಂಚುತ್ತಾ ಕುಳಿತಿದ್ದಾರೆ. ಬೇರೆಯವರಿಗೂ ಅವಕಾಶ ಕೊಡಿ, 2 ಮತ್ತು 3ನೇ ಪಂಕ್ತಿಗೆ ಕಾದವರಿಗೂ ಈ ಸವಲತ್ತು ಉಣಬಡಿಸಿ ಎಂದು ಸಲಹೆ ನೀಡಿದರು. ಎಸ್ಸಿಯ ಕೂಲಿಕಾರನ ಮಗನಿಗೆ ಅದೇ ಸಮುದಾಯದ ಐಎಎಸ್ ಅಧಿಕಾರಿ ಮಗನ ಜತೆ ಸ್ಪರ್ಧೆ ಮಾಡಲಿಕ್ಕಾಗುತ್ತದೆಯೆ? ಎಂದು ವೈ.ಎ.ನಾರಾಯಣಸ್ವಾಮಿ ಕೇಳಿದರು. ‘ಮೀಸಲು ಸವಲತ್ತು ಬಳಕೆಯಲ್ಲೂ ಉದಾರತೆ ಮುಖ್ಯ. ಮೀಸಲು ಸೌಲಭ್ಯ ಎಲ್ಲರಿಗೂ ಹಂಚಿಕೆಯಾಗಬೇಕು’ ಎಂದು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರತಿಪಾದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net