

ಆಲ್ದೂರು: ಕೇಂದ್ರ ಸರ್ಕಾರ ಶೇ.33 ಮಹಿಳಾ ಮೀಸಲಾತಿ ಜಾರಿಗೆ ತಂದಿರುವುದನ್ನು ಸ್ವಾಗತಿಸಿ ಶನಿವಾರ ಆಲ್ದೂರು ಮಂಡಲ ಬಿಜೆಪಿ ಮಹಿಳಾ ಮೋರ್ಚಾದಿಂದ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು.
ಬಿಜೆಪಿ ಆಲ್ದೂರು ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಚಂಪಾ ಜಗದೀಶ್ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ರಾಜಕೀಯವಾಗಿ ಮುಂದೆ ಬರಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಹೆಚ್ಚಿಸಿ ಶಕ್ತಿ ತುಂಬುವ ಕೆಲಸ ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
1976ರಲ್ಲಿ ಅಧಿಕಾರದಲ್ಲಿದ್ದ ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ಮಹಿಳೆಯರ ಕಣ್ಣೊರೆಸುವ ನಾಟಕವಾಡಿತ್ತು. 1988ರಲ್ಲೂ 400 ಸಂಸದರನ್ನು ಹೊಂದಿದ್ದರೂ ಮಸೂದೆ ಅಂಗೀಕರಿಸುವಲ್ಲಿ ವಿಲವಾಗಿತ್ತು ಎಂದರು.
ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಭವ್ಯಾ ನಟೇಶ್ ಮಾತನಾಡಿ, ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಶಕ್ತಿ ಮಹಿಳೆಯರಿಗಿದೆ ಎಂಬುದನ್ನು ನರೇಂದ್ರ ಮೋದಿ ಸರ್ಕಾರ ಸಾಬೀತುಪಡಿಸಿದೆ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ನಳಿನಿ ಧರ್ಮರಾಜ್, ಆಲ್ದೂರು ಗ್ರಾಪಂ ಮಾಜಿ ಅಧ್ಯಕ್ಷೆ ಪ್ರತಿಭಾ ನವೀನ್, ಪೃಥ್ವಿ ಸಂತೋಷ್, ಜಿಲ್ಲಾ ಮಹಿಳಾ ಎಸ್ಸಿ ಮೋರ್ಚಾ ಉಪಾಧ್ಯಕ್ಷೆ ದೀಪಾ ನಾಗೇಶ್, ಜಿಲ್ಲಾ ಸಮಿತಿ ಕಾರ್ಯದರ್ಶಿ ಸಂಪತ್ ಹೆಡದಾಳ್, ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾರಾಯಣ ಆಚಾರ್ಯ, ಕಾರ್ಯಕರ್ತರು ಇದ್ದರು