

ಬೆಂಗಳೂರು: ಮಾಜಿ ಸೈನಿಕರ ಮಕ್ಕಳಿಗೆ ವೃತ್ತಿಪರ ವ್ಯಾಸಂಗಗಳು ಸೇರಿ ಶಿಕ್ಷಣದಲ್ಲಿ ಶೇಕಡ 3ರಷ್ಟು ಮೀಸಲು ಸೌಲಭ್ಯ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ.
ವಿಧಾನಸೌಧದ ಸಿಎಂ ಕಚೇರಿಯಲ್ಲಿ ಸಿದ್ದರಾಮಯ್ಯ ಅವರಿಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ನಿಯೋಗ ಸೋಮವಾರ ಭೇಟಿ ಹಲವು ಬೇಡಿಕೆಗಳನ್ನು ಈಡೇರಿಸಲು ಕೋರಿತು.
ಕಾಯ್ದೆ ಪ್ರಕಾರ ಮಾಜಿ ಸೈನಿಕರ ಮಕ್ಕಳಿಗೆ ಶಿಕ್ಷಣದಲ್ಲಿ ಮೀಸಲು ಒದಗಿಸುವ ಅವಕಾಶವಿದ್ದು, ಜಾರಿಗೆ ತರಬೇಕು ಎಂದು ನಿಯೋಗ ಕೋರಿತು. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚಿಸಿದರು.
ಸೇವೆಯಿಂದ ನಿವೃತ್ತರಾದ ಮಾಜಿ ಸೈನಿಕರು ಜೀವನೋಪಾಯಕ್ಕೆ ಜಮೀನು ಮಂಜೂರು ಕೋರಿ 6,017 ಜನರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 600 ಅರ್ಜಿದಾರರಿಗೆ ಜಮೀನು ಮಂಜೂರಾಗಿದ್ದು, ಉಳಿದ ಅರ್ಜಿಗಳಿಗೆ ಆದ್ಯತೆ ಮೇಲೆ ಮಂಜೂರು ಮಾಡುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ನಿಯೋಗ ಅಹವಾಲು ಸಲ್ಲಿಸಿತು.
ಮಾಜಿ ಸೈನಿಕರಿಗೆ ಜಮೀನು ಮಂಜೂರು ಕುರಿತು 2016ರಿಂದಲೂ ಕಾಲ ಕಾಲಕ್ಕೆ ಸರ್ಕಾರ ಆದೇಶ ಹೊರಡಿಸುತ್ತಿದ್ದು, ಜಿಲ್ಲಾಮಟ್ಟದಲ್ಲಿ ಅನುಷ್ಠಾನಕ್ಕೆ ಬರುತ್ತಿಲ್ಲ. ಜಮೀನು ವರ್ಗೀಕರಣ ಸಂಬಂಧ ನಿರ್ಬಂಧನೆ 9 ಮತ್ತು 5 ಕೈಬಿಟ್ಟರೆ ಜಮೀನು ಮಂಜೂರು, ಅರ್ಜಿಗಳ ವಿಲೇವಾರಿ ತ್ವರಿತವಾಗಿ ಸಾಧ್ಯವಾಗಲಿದೆ ಎಂದು ಮಾಜಿ ಸೈನಿಕರು ನಿವೇದಿಸಿದರು.
ವೀರನಾರಿಯರು, ವೀರ ಯೋಧರು ಅಗತ್ಯ ಸವಲತ್ತು, ಮಾಜಿ ಸೈನಿಕರಿಗೆ ವೇತನ ಭದ್ರತೆ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಲು ಕೋರಿದಾಗ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದರು. ನಿಯೋಗದಲ್ಲಿ ಸಂಘದ ರಾಜ್ಯ ಅಧ್ಯಕ್ಷ ಡಾ.ಶಿವಣ್ಣ, ಪ್ರಧಾನ ಕಾರ್ಯದರ್ಶಿ ಎಚ್.ಜಿ.ಲಕ್ಷ್ಮೀಶ್, ಜಿಲ್ಲಾ ಘಟಕದ ಅಧ್ಯಕ್ಷರು, ಮಾಜಿ ಸೈನಿಕರು ಇದ್ದರು.