ಆತ್ಮಹತ್ಯೆಗೆ ಮುಂದಾಗಿದ್ದ ಯುವಕನ ರಕ್ಷಣೆ

kgl crime
ಕಾರ್ಗಲ್ ಪಿಎಸ್‌ಐ ಎಚ್.ಎನ್.ನಾಗರಾಜ್ ಅವರು ಪ್ರದೀಪ್ ಮನವೊಲಿಸುತ್ತಿರುವುದು.
Published on

ಕಾರ್ಗಲ್: ಸಾಲ ಮಾಡಿ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ನಿರ್ಧಾರ ಮಾಡಿ ಜೋಗ ಜಲಪಾತ ಪ್ರದೇಶಕ್ಕೆ ಬಂದಿದ್ದ ಬೆಂಗಳೂರಿನ ಯುವಕನನ್ನು ಸಾಗರ ತಾಲೂಕಿನ ಕಾರ್ಗಲ್ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಎಚ್.ಎನ್.ನಾಗರಾಜ್ ಮನವೊಲಿಸಿ ವಾಪಸ್ ಕಳುಹಿಸಿದ್ದಾರೆ.

ಬಟ್ಟೆ ವ್ಯಾಪಾರದಲ್ಲಿ ತೊಡಗಿದ್ದ ಬೆಂಗಳೂರಿನ ಯುವಕ ಪ್ರದೀಪ್ ನಿರೀಕ್ಷಿತ ಯಶಸ್ಸು ಕಾಣದೆ ವ್ಯಾಪಾರಕ್ಕಾಗಿ ಹಾಗೂ ತಂದೆ ತಾಯಿಗೆ ಚಿಕಿತ್ಸೆ ಕೊಡಿಸಲು 35 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಸಾಲವನ್ನು ತೀರಿಸಲಾಗದೆ 20 ದಿನಗಳ ಹಿಂದೆ ಮನೆ ಬಿಟ್ಟು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ದಿನಗಳನ್ನು ಕಳೆದಿದ್ದಾನೆ. ಅಂತಿಮವಾಗಿ ಆತ್ಮಹತ್ಯೆ ನಿರ್ಧಾರ ಕೈಗೊಂಡು ಸೋಮವಾರ ಜೋಗ ಜಲಪಾತದ ಕಡೆಗೆ ಬಂದಿದ್ದಾನೆ.

ಜೋಗ ಜಲಪಾತ ಪ್ರದೇಶದಲ್ಲಿ ಅಡ್ಡಾಡಿ ಇಲ್ಲಿನ ಅಪಾಯಕಾರಿ ಸ್ಥಳಗಳ ಬಗ್ಗೆ ಸ್ಥಳೀಯ ಆಟೋ ಚಾಲಕ ಶಿಯಾಬ್ ಎಂಬುವರನ್ನು ವಿಚಾರಿಸಿದ್ದಾನೆ. ಅನುಮಾನಗೊಂಡ ಶಿಯಾಬ್ ರೌಂಡ್ಸ್‌ನಲ್ಲಿದ್ದ ಪೋಲಿಸರಿಗೆ ತಿಳಿಸಿ, ಕೂಡಲೇ ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಪಿಎಸ್‌ಐ ನಾಗರಾಜ್ ಅವರು ಪ್ರದೀಪ್ ಜತೆ ಸುದೀರ್ಘವಾಗಿ ಮಾತನಾಡಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜತೆಗೆ ಆತನ ತಂದೆ ತಾಯಿಯೊಂದಿಗೆ ಫೋನಿನಲ್ಲಿ ಮಾತನಾಡಿಸಿ ಧೈರ್ಯ ತುಂಬಿದ್ದಾರೆ. ಆತನಿಗೆ ಹಣ ಕೊಟ್ಟು ವಾಪಸ್ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ. ಪೊಲೀಸರ ಈ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net