ಗ್ರಾಮ ಪಂಚಾಯಿತಿ ವ್ಯಾಪ್ತಿಗೂ ರೆರಾ ಕಡ್ಡಾಯ

rera
Published on

ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನುಮೋದಿತ ಬಡಾವಣೆಗಳು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ (ರೆರಾ) ಕಡ್ಡಾಯವಾಗಿ ನೋಂದಣಿ ಮಾಡಿಸಬೇಕೆಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ಕ್ಕೆ ಸರ್ಕಾರ ತಿದ್ದುಪಡಿ ತಂದಿದೆ. ಕಟ್ಟಡಗಳ ನಿರ್ಮಾಣದ ಮೇಲೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯತ್‌ಗಳ ನಿಯಂತ್ರಣ ಇರಲಿದೆ. ಭೂ ಪರಿವರ್ತಿತ ಭೂಮಿಗಳಲ್ಲಿ ಕಟ್ಟಡ ನಿರ್ಮಿಸಲು ನಕ್ಷೆಗೆ ಅನುಮೋದನೆ ನೀಡುವಾಗ ಕಡ್ಡಾಯವಾಗಿ ರೇರಾದಲ್ಲಿ ನೋಂದಣಿ ಮಾಡಿಸುವಂತೆ ಷರತ್ತು ವಿಧಿಸಲಾಗಿದೆ.

ಕಾಮಗಾರಿ ಪೂರ್ಣಗೊಂಡ ಆನಂತರ ಅರ್ಹ ವಾಸ್ತುಶಿಲ್ಪಿ ಕಟ್ಟಡದ ನಿರ್ಮಾಣದ ಮೇಲ್ವಿಚಾರಣೆ ನಡೆಸಿದ ಅರ್ಹ ಇಂಜಿನಿಯರ್ ಅಥವಾ ಮೇಲ್ವಿಚಾರಕರಿಂದ ಕಟ್ಟಡ ಪೂರ್ಣಗೊಂಡಿರುವ ಪತ್ರ ಪಡೆಯಬೇಕು. ಬಳಿಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಸ್ಥಳೀಯ ಯೋಜನಾ ಪ್ರಾಧಿಕಾರದ ತಾಂತ್ರಿಕ ಅಧಿಕಾರಿಗಳೊಡನೆ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಬೇಕು.

ಕಟ್ಟಡದ ನಕಾಶೆಗೆ ಅನುಗುಣವಾಗಿ ನಿರ್ಮಿತವಾಗಿರುವ ಬಗ್ಗೆ ಮತ್ತು ರೇರಾ ನೋಂದಣಿ ಆಗಿರುವ ಬಗ್ಗೆ ಪರಿಶೀಲನೆ ಮಾಡಬೇಕು. ಆನಂತರ ತಾಂತ್ರಿಕ ಅಧಿಕಾರಿ ಮತ್ತು ಪಿಡಿಒ ಜಂಟಿಯಾಗಿ ಸಹಿ ಮಾಡಿ ದಾಖಲೆ ನೀಡಬೇಕೆಂದು ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net