

ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು ಓಕೆ, ಆದರೆ ಮದ್ಯಪಾನ ಮಾಡಿ ಮತ ಚಲಾಯಿಸುವಂತಿಲ್ಲ ಎಂಬ ಕಾನೂನು ಇಲ್ಲ ಯಾಕೆ? ಎಂಬ ವಿಚಾರವೊಂದು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಚರ್ಚೆಗೊಳಗಾಗಿತ್ತು. ಮತದಾನದ ಕೇಂದ್ರದಲ್ಲಿ ಮದ್ಯಪಾನ ಪರೀಕ್ಷೆ ನಡೆಸಬೇಕು ಎಂಬ ಕುರಿತು ವ್ಯಕ್ತಿಯೊಬ್ಬರು ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ವಿಚಾರ ಚರ್ಚೆಗೆ ಬಂದಿತ್ತು. ಆ ಮನವಿಗೆ ಉಪ ಮುಖ್ಯ ಚುನಾವಣಾಧಿಕಾರಿಯವರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ.
ಮದ್ಯಪಾನ ಮಾಡಿ ಮತ ಚಲಾಯಿಸುವುದರಿಂದ ಏನೇನು ತೊಂದರೆ ಆಗುತ್ತದೆ ಹಾಗೂ ಅದಕ್ಕೆ ನಿರ್ಬಂಧ ವಿಧಿಸುವುದರಿಂದ ಎಷ್ಟೆಲ್ಲ ಅನುಕೂಲ ಆಗುತ್ತದೆ ಎಂಬ ಕುರಿತು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಂದ್ರಶೇಖರ ಎಂಬವರು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಮೇ 12ರಂದು ಪತ್ರ ಬರೆದಿದ್ದರು. ಮತದಾನ ಕೇಂದ್ರದ ಪತ್ರಿ ಬೂತಿನ ಪ್ರವೇಶದ್ವಾರದಲ್ಲಿ ಬಿಎಸಿ ಬ್ರೆಥಲೈಸರ್ ಟೆಸ್ಟರ್ಗಳನ್ನು ಅಳವಡಿಸಬೇಕು. ಆ ಮೂಲಕ ಮತದಾರ ಮದ್ಯಪಾನ ಮಾಡಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡೇ ಮತ ಚಲಾವಣೆಗೆ ಅವಕಾಶ ನೀಡುವಂಥ ನಿಯಮ ಜಾರಿಗೆ ತರಬೇಕು ಎಂದು ಕೋರಿಕೊಂಡಿದ್ದರು.
ಮತದಾನ ದಿನದಂದು ಮತದಾನ ಕೇಂದ್ರದ ಪ್ರತಿ ಬೂತ್‌ನ ಮುಖ್ಯ ದ್ವಾರದಲ್ಲಿ BAC Breathalyzer tester ಯಂತ್ರ ಅಳವಡಿಸುವ ಸಂಬಂಧ ಸೂಕ್ತ ಕಾನೂನನ್ನು ಜಾರಿಗೆ ತರುವಂತೆ ಕೋರಿ ನೀವು ಸಲ್ಲಿಸಿರುವ ಮನವಿಯನ್ನು ಪರಿಶೀಲಿಸಲಾಯಿತು. ಸದರಿ ವಿಷಯವು ಭಾರತ ಚುನಾವಣಾ ಆಯೋಗದ ವ್ಯಾಪ್ತಿಗೆ ಒಳಪಡುವುದರಿಂದ ತಮ್ಮ ಮನವಿಯನ್ನು ನೇರವಾಗಿ ಭಾರತ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ತಮಗೆ ಈ ಮೂಲಕ ತಿಳಿಯಪಡಿಸಿದೆ ಎಂಬುದಾಗಿ ಉಪ ಚುನಾವಣಾಧಿಕಾರಿ ಪ್ರತಿಕ್ರಿಯೆ ನೀಡಿದ್ದಾರೆ.