

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಗೆ ಸಲಹಾ ಸಮಿತಿ ಸದಸ್ಯರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿ ಬುಧವಾರ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್ ನೇತೃತ್ವದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಹಲವು ಲೋಪದೋಷಗಳಿದ್ದು ರೋಗಿಗಳು ಪರದಾಡುವಂತಾಗಿದೆ. ವೈದ್ಯರು ಕೂಡ ನಿರ್ಲಕ್ಷ್ಯ ತೋರುತ್ತಿದ್ದಾರೆ. ಡಿ ದರ್ಜೆ ಸೇರಿ ನೌಕರರ ಕುಂದುಕೊರತೆಗಳಿವೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಸಲಹಾ ಸಮಿತಿ ಸದಸ್ಯರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗ ನಗರ ವೇಗವಾಗಿ ಬೆಳೆಯುತ್ತಿರುವುದರಿಂದ ಮೆಗ್ಗಾನ್ ಆಸ್ಪತ್ರೆಗೆ ಬಡವರು, ವೃದ್ಧರು ಬರುವುದು ಕಷ್ಟವಾಗುತ್ತಿದೆ. ಆದ್ದರಿಂದ ಇವರಿಗೆ ಅನುಕೂಲವಾಗುವಂತೆ ನಗರದ 4 ಭಾಗಗಳಲ್ಲಿಯೂ ಪಬ್ಲಿಕ್ ಹೆಲ್ತ್ ಸೆಂಟರ್ ಪ್ರಾರಂಭಿಸಿದರೆ ಸಣ್ಣಪುಟ್ಟ ಕಾಯಿಲೆಗಳಿರುವವರು ಮೆಗ್ಗಾನ್ ಆಸ್ಪತ್ರೆಗೆ ಬರುವುದು ತಪ್ಪುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾನಗರ ಭಾಗದಲ್ಲಿ ಆರಂಭವಾಗಿರುವ ಆರೋಗ್ಯ ಕೇಂದ್ರಕ್ಕೆ ಮತ್ತಷ್ಟು ಉಪಕರಣ ನೀಡಬೇಕು ಎಂದು ಮನವಿ ಮಾಡಿದರು. ಎಂ.ಎಸ್.ಶಿವಕುಮಾರ್, ವಿಶ್ವನಾಥ್ ಕಾಶಿ, ಚಿನ್ನಪ್ಪ ಇತರರಿದ್ದರು.