

ಶಿವಮೊಗ್ಗ: ಸೊರಬ ತಾಲೂಕು ಜೇಡಗೇರಿ ಗ್ರಾಮದ ಸರ್ವೇ ನಂ.57ರ 1.20 ಎಕರೆ ಜಾಗದಲ್ಲಿ ನಮ್ಮ ಕುಟುಂಬದಿಂದ ನೆಡಲಾಗಿದ್ದ ಅಡಕೆ ಸಸಿಗಳನ್ನು ಕಿತ್ತು ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಜೇಡಗೇರಿ ಗ್ರಾಮದ ಭೀಮಪ್ಪ ಎಂಬುವವರ ಪುತ್ರ ರಘು ಮಂಗಳವಾರ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ಜಮೀನಿನಲ್ಲಿ ನಮ್ಮ ಕುಟುಂಬ ಬಗರ್‌ಹುಕುಂ ಸಾಗುವಳಿ ಮಾಡುತ್ತಿತ್ತು. ಆದರೆ ನಮ್ಮ ಗ್ರಾಮದ ಕೆಲ ಮಂದಿ ಅಡಕೆ ಸಸಿಗಳನ್ನು ಕಿತ್ತು ಹಾಕಿದ್ದಾರೆ. ಅಲ್ಲದೇ ನಮ್ಮ ಕುಟುಂಬ ಇದೇ ಗ್ರಾಮದಲ್ಲಿ 2.5 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದೆ. ಅದಕ್ಕೂ ಕೆಲ ಗ್ರಾಮಸ್ಥರು ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.
ಸಾಗುವಳಿ ಮಾಡುತ್ತಿರುವ ಜಾಗವನ್ನು ದೇವಸ್ಥಾನಕ್ಕೆ ನೀಡುವಂತೆ ಗ್ರಾಮದ ಅನೇಕರು ಒತ್ತಾಯಿಸುತ್ತಿದ್ದಾರೆ. ನಾವು ಒಪ್ಪದ ಕಾರಣ 2016ರಿಂದಲೂ ನಮ್ಮ ಕುಟುಂಬದ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ. ನಮ್ಮ ಮೇಲೆ ವಿನಾಕಾರಣ ವ್ಯಾಜ್ಯ ಮಾಡುತ್ತಿದ್ದಾರೆ. ಈ ಸಂಬಂಧ ಸೊರಬ ಠಾಣೆಯಲ್ಲಿ ದೂರು ದಾಖಲಾಗಿದೆ. ನಮ್ಮ ಕುಟುಂಬದ ಸದಸ್ಯರ ಮೇಲೆ ಅನೇಕ ಬಾರಿ ಹಲ್ಲೆ ನಡೆದಿದೆ. ನಮ್ಮ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಭೀಮಪ್ಪ ಹಾಗೂ ಅವರ ಪತ್ನಿ ಗಿರಿಜಮ್ಮ ಮನವಿ ಸಲ್ಲಿಸುವ ಸಂದರ್ಭದಲ್ಲಿದ್ದರು.