

ಶಿವಮೊಗ್ಗ: ಕಾರ್ಪೊರೇಟ್ ಕ್ಷೇತ್ರದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗುತ್ತದೆ. ಅದನ್ನು ಸದ್ಬಳಕೆ ಮಾಡಿಕೊಂಡು ಅನೇಕ ಮಹಿಳೆಯರು ಸಾಧನೆ ಮಾಡಿದ್ದಾರೆ. ನಾವು ನಿರ್ವಹಿಸುವ ಕೆಲಸದಲ್ಲಿ ನಂಬಿಕೆ ಹಾಗೂ ಬದುಕಿನಲ್ಲಿ ಶಿಸ್ತು ಅಳವಡಿಸಿಕೊಂಡರೆ ಕಷ್ಟದ ದಿನಗಳಿಂದ ಹೊರಬಂದು ಸಾಧನೆ ಹಾದಿಯಲ್ಲಿ ಸಾಗಬಹುದು ಎಂದು ಶಾಂತಲಾ ಸ್ಪೆರೋಕಾಸ್ಟ್ ವ್ಯವಸ್ಥಾಪಕ ನಿರ್ದೇಶಕ ಎ.ಎಲ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಓರಿಯೆಂಟೇಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದ ಪಡೆಯುವ ಜ್ಞಾನದ ಜತೆಗೆ ಸಮಾಜಕ್ಕೆ ಅವಶ್ಯಕವಿರುವ ಕೌಶಲಗಳನ್ನು ವಿದ್ಯಾರ್ಥಿ ಜೀವನದಲ್ಲಿಯೇ ಅಳವಡಿಸಿಕೊಳ್ಳಬೇಕು ಎಂದರು.
ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ದೇಶ ಹಾಗೂ ರಾಜ್ಯದಲ್ಲಿನ ಆರ್ಥಿಕ ವ್ಯವಸ್ಥೆ, ಖರ್ಚು, ಆದಾಯ, ಬಜೆಟ್ ಎಲ್ಲದರ ಕುರಿತ ಜ್ಞಾನ ಹೊಂದಿರಬೇಕು. ಸಮಾಜದ ಅಭ್ಯುದಯಕ್ಕೆ ಬೇಕಾದ ಅವಶ್ಯಕ ಯೋಜನೆಗಳ ಕುರಿತು ಸಮೀಕ್ಷೆ ಮಾಡಬೇಕು. ಬದುಕು ಪ್ರತಿಯೊಬ್ಬರಿಗೂ ವಿಭಿನ್ನವಾಗಿದ್ದು, ಬದುಕಿನ ದಾರಿಯಲ್ಲಿ ಎದುರಾಗುವ ಸವಾಲುಗಳ ಎದುರಿಸಲು ಸನ್ನದ್ಧರಾಗಬೇಕೆಂದರು.
ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಮಾತನಾಡಿ, ಎಲ್ಲರನ್ನೂ ಹಿಂದಿಕ್ಕಿ ಹೋದ ವ್ಯಕ್ತಿ ಸ್ಪರ್ಧೆಯಲ್ಲಿ ಗೆಲ್ಲಬಹುದು. ಅದರೇ ಎಲ್ಲರನ್ನೂ ಜತೆಯಾಗಿಸಿಕೊಂಡು ಹೋದ ವ್ಯಕ್ತಿ ಜೀವನದಲ್ಲಿ ಗೆಲ್ಲುತ್ತಾನೆ. ಮೌಲ್ಯಗಳು ಬದುಕಿನ ಆಧಾರ ಸ್ತಂಭಗಳಾಗಿದ್ದು ಅದರ ಪ್ರಾಮುಖ್ಯ ಅರಿಯಬೇಕೆಂದರು.
ಗ್ರಾಮೀಣ ಉದ್ದಿಮೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ಹಳ್ಳಿಗಳಲ್ಲಿ ಅನೇಕ ಗುಡಿ ಮತ್ತು ಗೃಹ ಕೈಗಾರಿಕೆಗಳು ಪ್ರಾರಂಭಗೊಂಡಿದ್ದು ಮಾರ್ಕೆಟಿಂಗ್ ಮಾಡುವಲ್ಲಿ ಅನೇಕ ಸವಾಲುಗಳನ್ನು ಜನರು ಎದುರಿಸುತ್ತಿದ್ದಾರೆ. ಅಂತಹ ಸವಾಲುಗಳಿಗೆ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ಪರಿಹಾರ ಒದಗಿಸುವ ಪ್ರಯತ್ನ ಮಾಡಬೇಕೆಂದರು.
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಮಾತನಾಡಿದರು. ನಿರ್ದೇಶಕ ಎಚ್.ಸಿ.ಶಿವಕುಮಾರ್, ಪ್ರಾಚಾರ್ಯ ಡಾ.ವೈ.ವಿಜಯಕುಮಾರ್, ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಇತರರಿದ್ದರು.