

ಪುಣೆ: ವಾಹನಗಳಿಗೆ ಡೀಸೆಲ್ - ಪೆಟ್ರೋಲ್ ಅನ್ನು ಸಾಮಾನ್ಯವಾಗಿ ಬಂಕ್ಗಳಲ್ಲಿ ಹಾಕಿಸುತ್ತೇವೆ. ಆದರೆ ಇಲ್ಲೊಂದು ಆ ದಂಪತಿ ವಿಭಿನ್ನವಾಗಿ ಆಲೋಚಿಸಿ ಗ್ರಾಹಕರ ಮನೆ ಬಾಗಿಲಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಬರಾಜು ಮಾಡಿ 200ಕೋಟಿ ಸಾಮ್ರಾಜ್ಯದ ಒಡೆಯರಾಗಿದ್ದಾರೆ. ಪುಣೆಯ ಚೆತನ್ ವಾಲುಂಜ್ ಮತ್ತು ಅದಿತಿ ಭೋಸ್ಲೆ ಇಂತಹ ಸಾಧನೆ ತೋರಿದ ದಂಪತಿ, ಇವರ ಯಶೋಗಾಥೆ ಕಂಡು ರಾಷ್ಟ್ರದ ಖ್ಯಾತ ಉದ್ಯಮಿ ರತನ್ ಟಾಟಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೌದು, ಸಾಧಿಸುವ ಛಲ ಮತ್ತು ಕಠಿಣ ಶ್ರಮವಿದ್ದರೆ ಅಸಾಧ್ಯವಾದದ್ದನ್ನೂ ಸಾಧಿಸಬಹುದು ಎನ್ನುವುದಕ್ಕೆ ಈ ದಂಪತಿ ಆದರ್ಶಪ್ರಾಯವಾಗಿ ನಿಲ್ಲುತ್ತಾರೆ. ಹಲವು ಸಂಸ್ಥೆಗಳು ಆಹಾರ, ತರಕಾರಿ, ಔಷಧ ಸೇರಿದಂತೆ ಹಲವು ವಸ್ತುಗಳನ್ನು ಡೋರ್ ಡೆಲವರಿ ಮಾಡುತ್ತಿರುವುದನ್ನು ಕಂಡು ಫ್ಯೂಯೆಲ್(ಡೀಸೆಲ್ ಮತ್ತು ಪೆಟ್ರೋಲ್)ನ್ನು ಸಹ ಅದೇ ರೀತಿ ಮಾರಾಟ ಮಾಡಬೇಕೆಂದು ಆಲೋಚಿಸಿ 'ರೆಪೋಸ್ ಎನರ್ಜಿ'(ರೆಪೋಸ್ ಮೊಬೈಲ್ ಪೆಟ್ರೋಲ್ ಪಂಪ್ ) ಸಂಸ್ಥೆ ಪ್ರಾರಂಭಿಸಿದ್ದಾರೆ.
ರಾಷ್ಟ್ರದಲ್ಲಿ ಸ್ಟಾರ್ಟಾಪ್ ಸಂಸ್ಕೃತಿ ಹೆಚ್ಚುತ್ತಿದ್ದು, ಇದಕ್ಕೆ ಪೂರಕವಾಗಿ ಹೊಸ ಉದ್ದಿಮೆಗಳು ಹುಟ್ಟಿಕೊಳ್ಳುತ್ತಿವೆ. ಸ್ವಿಗ್ಗಿ, ಜೊಮಾಟೊ ತರಹದ ವಾಹನ ಬಳಕೆದಾರರಿಗೆ ಅಗತ್ಯವಾದ ಡೀಸೆಲ್, ಪೆಟ್ರೋಲ್ ಅನ್ನು ಮನೆ ಬಾಗಿಲಿಗೆ ಒದಗಿಸಿ 200 ಕೋಟಿ ರೂ.ಸಂಪಾದನೆ ಮಾಡಿದ್ದಾರೆ.
ಅದಿತಿಗೆ ಸ್ಟಾರ್ಟಾಪ್ ಕನಸು: ಮದುವೆ ನಂತರ ಹೇಗಾದರೂ ಮಾಡಿ ಸ್ಟಾರ್ಟಾಪ್ ಸಂಸ್ಥೆ ಮಾಡಬೇಕೆಂದು ಕನಸು ಕಂಡಿದ್ದ ಅದಿತಿ, ಪತಿ ಜೊತೆ ಪುಣೆಯಲ್ಲಿ ರೆಪೋಸ್ ಎನರ್ಜಿ ಪ್ರಾರಂಭಿಸಿದರು. ಪ್ರಸ್ತುತ ದೇಶಾದ್ಯಂತ 65 ನಗರಗಳಿಗೆ ಇದರ ಬ್ರಾಂಚ್ಗಳು ವಿಸ್ತರಿಸಿದ್ದು ವ್ಯಾಪಾರ-ವಹಿವಾಟಿನಲ್ಲಿ ಯಶಸ್ಸು ಕಂಡಿದ್ದಾರೆ.
ಪ್ರಾರಂಭದಲ್ಲಿ ಮಾಸಿಕ 70ಸಾವಿರ ರೂ.ವಹಿವಾಟು ನಡೆಯುತ್ತಿತ್ತು. ಆದರೆ ಈಗ 200ಕೊಟಿ ರೂ.ವಹಿವಾಟು ನಡೆಸುತ್ತಿರುವುದು ಪ್ರಮುಖ ವಾಣಿಜ್ಯೋದ್ಯಮಿಗಳು ಇತ್ತ ತಿರುಗಿ ನೋಡುವಂತೆ ಮಾಡಿದೆ. ಈ ದಂಪತಿಯ ಹೊಸ ಆಲೋಚನೆಗೆ ಮಂತ್ರಮುಗ್ಧರಾಗಿರುವ ದೇಶದ ಪ್ರಮುಖ ಉದ್ಯಮಿ ರತನ್ ಟಾಟಾ 'ರೆಪೋಸ್ ಎನರ್ಜಿ' ಸಂಸ್ಥೆಯಲ್ಲಿ ಹೂಡಿಕೆಗೆ ಮುಂದೆ ಬಂದಿದ್ದಾರೆ. ಹೀಗಾಗಿ ಸಂಸ್ಥೆ ಆದಾಯ ಕಳೆದ ವರ್ಷ 65 ಕೋಟಿ ರೂ,ಗಳಿಸಿದೆ.
'ರೆಪೋಸ್ ಎನರ್ಜಿ' ಪ್ರಸ್ತುತ ಟಾಟಾ ಗ್ರೂಪ್, ಮಹಿಂದ್ರಾ ಅಂಡ್ ಮಹಿಂದ್ರಾ, ಜನರಲ್ ಎಲೆಕ್ರಿಕಲ್, ಲಾರೆನ್ಸ್ ಅಂಡ್ ಟಬ್ರೋ, ಷಿಂಡ್ಲರ್, ಜೆಡಬ್ಲ್ಯೂ, ಮಾರಿಯಟ್ ಹೋಟೆಲ್, ಫೀನಿಕ್ಸ್ ಮಾಲ್, ದಿ ವೆಸ್ಟಿನ್ ಹೋಟೆಲ್ನಂಥ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಂಡಿದೆ.