ಲೋಕಾ ಬಲ ಕಸಿದು ಕೈಗೊಂಬೆಯಾಗಿದ್ದ ಎಸಿಬಿ: ಸಣ್ಣವರ ಮೇಲಷ್ಟೇ ಪ್ರತಾಪ..

ACB
Published on

ಬೆಂಗಳೂರು: ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತಕ್ಕೆ ಪರ್ಯಾಯವೆಂದು ಅಸ್ತಿತ್ವಕ್ಕೆ ಬಂದ ಎಸಿಬಿ, ಸರ್ಕಾರದ ಕೈಗೊಂಬೆಯಂತೆ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪ ಮೊದಲಿನಿಂದಲೂ ಕೇಳಿಬರುತ್ತಿದೆ. ದೊಡ್ಡದೊಡ್ಡ ಭ್ರಷ್ಟರನ್ನು ರಕ್ಷಿಸಿ, ಸಣ್ಣಪುಟ್ಟವರ ಮೇಲಷ್ಟೇ ಪ್ರತಾಪ ತೋರಿಸುತ್ತಿದೆ. ಈವರೆಗೆ 1800ಕ್ಕೂ ಅಧಿಕ ಪ್ರಕರಣ ದಾಖಲಾಗಿದ್ದರೂ ಬರೀ 10 ಕೇಸ್​ಗಳಲ್ಲಿ ಶಿಕ್ಷೆಯಾಗಿರುವುದೇ ಎಸಿಬಿ ಕಾರ್ಯವೈಖರಿಗೆ ಹಿಡಿದ ಕನ್ನಡಿ. ಲೋಕಾಯುಕ್ತ ಈಗಲೂ ಅಸ್ತಿತ್ವದಲ್ಲಿದ್ದರೂ ಶಿಕ್ಷೆ ರೂಪದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಅಲ್ಲಿಗೆ ವರ್ಗಾವಣೆಗೊಳಿಸಲಷ್ಟೇ ಸೀಮಿತವಾಗಿದೆ.

ಎಸಿಬಿ ತನಿಖೆ ನಡೆಸಲು 48 ಪ್ರಮುಖ ಪ್ರಕರಣಗಳಲ್ಲಿ ಸಕ್ಷಮ ಪ್ರಾಧಿಕಾರವು ಅನುಮತಿ ನೀಡಲು ನಿರಾಕರಿಸಿತ್ತು. ಕೆಲ ಸಣ್ಣ-ಪುಟ್ಟ ಪ್ರಕರಣ ಹೊರತುಪಡಿಸಿ ದೊಡ್ಡ ಭ್ರಷ್ಟರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ಎಸಿಬಿ ಸಂಪೂರ್ಣವಾಗಿ ವಿಫಲವಾಗಿದೆ. ಲೋಕಾಯುಕ್ತ ಸಂಸ್ಥೆ ಬೃಹತ್ ಭ್ರಷ್ಟಾಚಾರ ಪ್ರಕರಣಗಳನ್ನು ಪತ್ತೆ ಮಾಡಿ ಚಾರ್ಜ್​ಶೀಟ್ ಸಲ್ಲಿಸಿ, ಅಧಿಕಾರಿಗಳ ಎದೆಯಲ್ಲಿ ನಡುಕು ಹುಟ್ಟಿಸಿತ್ತು. ಆದರೆ, ಎಸಿಬಿ ಇಂತಹ ಒಂದೇ ಒಂದು ಪ್ರಕರಣವನ್ನೂ ಈವರೆಗೆ ಬೆಳಕಿಗೆ ತಂದಿಲ್ಲ.

ಉನ್ನತ ಹುದ್ದೆಯಲ್ಲಿದ್ದುಕೊಂಡು ಕೋಟ್ಯಾಂತರ ರೂ. ಬಾಚಿರುವ ಭ್ರಷ್ಟರು ಹಾಗೂ ಸಣ್ಣ-ಪುಟ್ಟ ಪ್ರಕರಣಗಳಲ್ಲಿ ಲಂಚ ಪಡೆದು ಸಿಕ್ಕಿಬಿದ್ದ ನೌಕರರ ವಿರುದ್ಧ ಎಸಿಬಿ ತಾರತಮ್ಯದ ಆರೋಪ ಕೇಳಿಬಂದಿತ್ತು. ಬಿಡಿಎ ಇಂಜಿನಿಯರ್​ಗಳು, ಕೆಐಎಡಿಬಿ ಅಧಿಕಾರಿಗಳು, ಪಿಡಬ್ಲ್ಯೂಡಿ ಇಂಜಿನಿಯರ್​ಗಳು, ಬಿಬಿಎಂಪಿ ಅಧಿಕಾರಿಗಳು, ಕಾರ್ವಿುಕ ಇಲಾಖೆ ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಅಧಿಕಾರಿಗಳು ಸೇರಿ ಉನ್ನತ ಹುದ್ದೆಯಲ್ಲಿದ್ದು ಭ್ರಷ್ಟಾಚಾರ ಎಸಗಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳ ಮೇಲೆ ದಾಳಿ ನಡೆಸಿ ವರ್ಷಗಳೇ ಉರುಳಿದರೂ ಎಸಿಬಿ ಇನ್ನೂ ಚಾರ್ಜ್​ಶೀಟ್ ಸಲ್ಲಿಸಿಲ್ಲ.

ಎಸಿಬಿಯಲ್ಲಿ ಎಷ್ಟು ಕೇಸ್​ಗಳಿವೆ?: ಎಸಿಬಿಯಲ್ಲಿ 2016ರಿಂದ ಈವರೆಗೂ ಅಂದಾಜು 1803 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 753 ಕೇಸಿನ ತನಿಖೆ ಪೂರ್ಣಗೊಂಡು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ. 682 ಕೇಸುಗಳು ವಿಚಾರಣೆ ಹಂತದಲ್ಲಿದ್ದು, 10 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 2 ಕೇಸುಗಳು ಸಿಬಿಐಗೆ ವರ್ಗಾವಣೆ ಆಗಿವೆ. 1335 ಸರ್ಕಾರಿ ಅಧಿಕಾರಿ, ಸಿಬ್ಬಂದಿ ಅಮಾನತುಗೊಂಡಿದ್ದು, 106 ಕೇಸಿನಲ್ಲಿ ಅಭಿಯೋಜನೆಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಸಿಗುವುದು ಬಾಕಿ ಉಳಿದಿದೆ. 520 ಪ್ರಕರಣಗಳಲ್ಲಿ ತನಿಖೆ ನಡೆಸಲು ವಿವಿಧ ಇಲಾಖೆಯಿಂದ ಅನುಮತಿಯೇ ದೊರೆತಿಲ್ಲ. ಇದರ ನಡುವೆ ಎಸಿಬಿ ಕಾರ್ಯನಿರ್ವಹಣೆ ಬಗ್ಗೆಯೇ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು. ಹೈಕೋರ್ಟ್ ಕೂಡ ಚಾಟಿ ಬೀಸಿತ್ತು.

ಲೋಕಾಗೆ ಟ್ರಾನ್ಸ್​ಪರ್ ಶಿಕ್ಷೆ: ಶಿಕ್ಷೆ ನೀಡುವ ರೂಪದಲ್ಲಿ ಲೋಕಾಯುಕ್ತಕ್ಕೆ ಕೆಲ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ಲೋಕಾಯುಕ್ತದಲ್ಲಿ 950 ನೌಕರರಿದ್ದು, ವಾರ್ಷಿಕವಾಗಿ ಅಂದಾಜು 65 ಕೋಟಿ ರೂ. ವ್ಯಯಿಸಲಾಗುತ್ತದೆ. ಇಲ್ಲಿನ ಸಿಬ್ಬಂದಿ ಕೆಲಸವಿಲ್ಲದೆ ಕೈ ಕಟ್ಟಿ ಕುಳಿತಿದ್ದಾರೆ. ಇತ್ತ ಎಸಿಬಿ ನಿರ್ವಹಣೆಗೂ ವಾರ್ಷಿಕವಾಗಿ ಕೋಟ್ಯಂತರ ರೂ. ಖರ್ಚು ಮಾಡಲಾಗುತ್ತಿದೆ. ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳ ಅವ್ಯವಹಾರ ಬಯಲಿಗೆ ಬರುತ್ತದೆಂಬ ಆತಂಕದಿಂದ ಲೋಕಾ ಅಧಿಕಾರ ಮೊಟಕುಗೊಳಿಸಿರುವ ಆರೋಪವಿದೆ.

ಲೋಕಾದಲ್ಲಿ ಎಷ್ಟು ಕೇಸ್​ಗಳಿವೆ?: ಲೋಕಾಯುಕ್ತ ಸಂಸ್ಥೆಯಲ್ಲಿ 8,036 ದೂರುಗಳು ಬಾಕಿ ಇವೆ. ಈ ಪೈಕಿ 2,430 ವಿಚಾರಣಾ ಹಂತದಲ್ಲಿ ಇವೆ. 5 ವರ್ಷಗಳಲ್ಲಿ 20,549 ದೂರು ಹಾಗೂ 2,431 ವಿಚಾರಣಾ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 13 ಸಾವಿರ ಗಂಭೀರವಲ್ಲದ ಕೇಸ್ ದಾಖಲಾಗಿದ್ದು, ಈ ಪೈಕಿ 12 ಸಾವಿರ ಕೇಸ್ ಇತ್ಯರ್ಥವಾಗಿವೆ. 2017ರ ಜ. 28ರಿಂದ ಇದುವರೆಗೆ ಲೋಕಾಯುಕ್ತ ಸಂಸ್ಥೆಯಲ್ಲಿ ಒಟ್ಟು 20,199 ದೂರು ಹಾಗೂ 2,677 ವಿಚಾರಣಾ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಅವಧಿಯಲ್ಲಿ 2,122 ಪ್ರಕರಣಗಳಲ್ಲಿ ಲೋಕಾಯುಕ್ತ ಕಾಯ್ದೆ ಕಾಲಂ 12(3)ರ ಅನ್ವಯ ಹಾಗೂ 587 ಕೇಸ್​ಗಳಲ್ಲಿ ಕಲಂ 12(1)ರ ಅನ್ವಯ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಕಳೆದ 5 ವರ್ಷಗಳಲ್ಲಿ 304 ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಸಾರ್ವಜನಿಕರ ಕುಂದುಕೊರತೆಗಳ ನಿವಾರಣೆಗೆ ಲೋಕಾಯುಕ್ತರು ಪ್ರಯತ್ನಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಂದಿದ್ದ ಅನೇಕ ಆರೋಪಗಳನ್ನು ಮೂಲೆಗುಂಪು ಮಾಡುವ ನಿಟ್ಟಿನಲ್ಲಿ ಎಸಿಬಿ ರಚನೆಯಾಗಿತ್ತು. ಎಸಿಬಿ ರದ್ದು ಮಾಡಿ ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ನಿಲ್ಲಿಸುತ್ತಾರೆ ಎಂಬ ನಂಬಿಕೆ ನನಗೆ ಇಲ್ಲ. ಕುರಿ ಕಾಯುವುದಕ್ಕೆ ತೋಳ ಬಿಡುತ್ತಾರೆ ಎನ್ನುತ್ತಾರಲ್ಲ ಹಾಗೆ ಇದು. | ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ

ಸರ್ಕಾರದ ಅಧೀನದಲ್ಲೇ ಎಸಿಬಿ: ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹಿಸುವ ನಿಟ್ಟಿನಲ್ಲಿ ಲೋಕಾಯುಕ್ತಕ್ಕಿದ್ದ ಅಧಿಕಾರ ಮೊಟಕುಗೊಳಿಸಿ 2016ರಲ್ಲಿ ಎಸಿಬಿ ಸಂಸ್ಥೆ ಸ್ಥಾಪಿಸಲಾಗಿತ್ತು. ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984 ಹಾಗೂ ಭ್ರಷ್ಟಾಚಾರ ತಡೆ ಅಧಿನಿಯಮ 1988 ಎರಡು ಪ್ರತ್ಯೇಕ ಶಾಸನಗಳು. ಈ ಹಿಂದೆ ಲೋಕಾಯುಕ್ತ ಪೊಲೀಸರು ಸ್ವಾತಂತ್ರ್ಯಾಗಿ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದರು. ಆದರೆ, ಎಸಿಬಿ ಅಧಿಕಾರಿಗಳು ರಾಜ್ಯದ ಮುಖ್ಯಮಂತ್ರಿಗಳು, ಗೃಹ ಸಚಿವರು ಮತ್ತು ಗೃಹಸಚಿವರ ಸಲಹೆಗಾರರು ಸೂಚಿಸಿದಂತೆ ಕೆಲಸ ಮಾಡುವುದು ಅನಿವಾರ್ಯ. ಎಸಿಬಿ ಸರ್ಕಾರದ ಅಧೀನದಲ್ಲೇ ಬರುವುದರಿಂದ ಈ ಸಂಸ್ಥೆಯನ್ನು ಕೈಗೊಂಬೆಯಾಗಿ ಬಳಸಲಾಗುತ್ತಿದೆ.

ಎಸಿಬಿಗೆ ಮುಖ್ಯಮಂತ್ರಿಯೇ ಸುಪ್ರೀಂ: ಎಸಿಬಿಗೆ ಎಡಿಜಿಪಿ ದರ್ಜೆ ಐಪಿಎಸ್ ಅಧಿಕಾರಿ ಮುಖ್ಯಸ್ಥರಾಗಿದ್ದರೂ ಇವರ ಮೇಲೆ ಜಾಗೃತ ಸಲಹಾ ಮಂಡಳಿ ರಚಿಸಲಾಗಿದೆ. ಇದರ ಅಧ್ಯಕ್ಷರಾಗಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಒಳಾಡಳಿತ), ಡಿಜಿ-ಐಜಿಪಿ ಸೇರಿ 7 ಸದಸ್ಯರು ಇದ್ದಾರೆ. ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ 3 ತಿಂಗಳಿಗೆ ಒಮ್ಮೆ ಸಭೆ ನಡೆಸಿ ಮುಖ್ಯಮಂತ್ರಿಗೆ ವರದಿ ಒಪ್ಪಿಸಿ ಅನುಮೋದನೆ ಪಡೆಯಬೇಕು.

ಎಸಿಬಿ ಕ್ಲೀನ್​ಚಿಟ್ ಕೊಟ್ಟ ಪ್ರಮುಖ ಕೇಸ್!?

  • 2017ರಲ್ಲಿ ಸಿದ್ದರಾಮಯ್ಯ ಅವರನ್ನು ಸಂಕಷ್ಟಕ್ಕೀಡು ಮಾಡಿದ್ದ ವಜ್ರ ಖಚಿತ ಹ್ಯೂಬ್ಲೋಟ್ ವಾಚ್ ಪ್ರಕರಣ
  • ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಡಯಾಗ್ನಾಸ್ಟಿಕ್ ಸರ್ವೀಸಸ್ ಘಟಕ ಆರಂಭಿಸಲು ಸಿದ್ದರಾಮಯ್ಯ ಪುತ್ರ ಯತೀಂದ್ರ ನಡೆಸುತ್ತಿದ್ದ ಮ್ಯಾಟ್ರಿಕ್ಸ್ ಇಮ್ಯಾಜಿಂಗ್ ಸಲ್ಯೂಷನ್ಸ್ ಕಂಪನಿಗೆ ನಿಯಮ ಉಲ್ಲಂಘಿಸಿ ಟೆಂಡರ್ ನೀಡಿರುವ ಪ್ರಕರಣ.
  • ಸರ್ಕಾರಿ ನೌಕರಿ ಪಡೆಯಲು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆರೋಪಿಸಿ ಗೃಹ ಇಲಾಖೆ ಸಲಹೆಗಾರರಾಗಿದ್ದ ಕೆಂಪಯ್ಯ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಸಿಬಿಗೆ ದೂರು ನೀಡಿದ್ದ ಪ್ರಕರಣ
  • ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಶಾಮೀಲಾಗಿದ್ದಾರೆ ಎಂದು ಆರೋಪಿಸಿ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ವಿರುದ್ಧ ದಾಖಲಿಸಿಕೊಂಡಿದ್ದ ಪ್ರಕರಣ
  • ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕ ವಿ.ಜಿ ನಾಯಕ್, ಸಹಾಯಕ ನಿರ್ದೇಶಕ ಡಾ.ಅರವಿಂದ್ ಅವರು ಸುಳ್ಳು ವರದಿ ನೀಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಕೊಟ್ಟಿದ್ದ ದೂರು.
  • ಅತ್ತಿಬೆಲೆ ಬಳಿ ಕೆಐಎಡಿಬಿಯು ನಿರ್ವಿುಸಲು ಉದ್ದೇಶಿಸಿದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ 4ನೇ ಹಂತಕ್ಕಾಗಿ ವಶಪಡಿಸಿಕೊಂಡಿದ್ದು, 2009ರಲ್ಲಿ ಭೂಸ್ವಾಧೀನವನ್ನು ಅಕ್ರಮವಾಗಿ ಕೈ ಬಿಟ್ಟಿರುವ ದೂರು.

ಲೋಕಾಯುಕ್ತಕ್ಕೆ ಎಸಿಬಿ ಪರ್ಯಾಯವಲ್ಲ

ಸರ್ಕಾರದ ಆದೇಶ ಪರೋಕ್ಷವಾಗಿ ಲೋಕಾಯುಕ್ತ ಅಧಿಕಾರಗಳಿಗೆ ಕತ್ತರಿ ಹಾಕಿದೆ. ಎಸಿಬಿ ಲೋಕಾಯುಕ್ತಕ್ಕೆ ಪರ್ಯಾಯ ಅಥವಾ ಪ್ರತ್ಯೇಕ ಸಂಸ್ಥೆಯಾಗಿ ಕೆಲಸ ಮಾಡಲಾಗದು. ಆದ್ದರಿಂದ, ಲೋಕಾಯುಕ್ತಕ್ಕೆ ನೀಡಲಾಗಿರುವ ಕೆಲಸ ಮಾಡಲು ಎಸಿಬಿ ರಚಿಸಿರುವ ಆದೇಶಕ್ಕೆ ಕಾನೂನಿನ ಮಾನ್ಯತೆಯೇ ಇಲ್ಲ ಎಂದು ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಲೋಕಾಯುಕ್ತದಂಥ ಸ್ವತಂತ್ರ ಸಂಸ್ಥೆಯು ಸಾರ್ವಜನಿಕ ಹಿತದೃಷ್ಟಿಯಿಂದ ಪಾರದರ್ಶಕವಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸುವ ಅಥವಾ ಬೆಂಬಲಿಸುವ ಇಚ್ಛೆಯನ್ನು ಯಾವುದೇ ರಾಜಕೀಯ ಪಕ್ಷಗಳು ಹೊಂದಿಲ್ಲದಿರುವುದು ದುರಾದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ಭ್ರಷ್ಟಾಚಾರ ನಿಯಂತ್ರಣ, ಪಕ್ಷಪಾತ ಮತ್ತು ಆಡಳಿತದಲ್ಲಿ ಅಧಿಕಾರಿಗಳ ಅಶಿಸ್ತನ್ನು ತಡೆಯುವುದೇ ರಾಜ್ಯ ಸರ್ಕಾರದ ಉದ್ದೇಶವಾಗಿದ್ದರೆ, ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಿರುವಂತೆ ಮುಖ್ಯಮಂತ್ರಿಗಳಿಗೆ ಬದಲಾಗಿ ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 15(3)ರಡಿ ಎಸಿಬಿಯನ್ನು ಲೋಕಾಯುಕ್ತದ ಅಧೀನದಲ್ಲಿ ಕೆಲಸ ಮಾಡಲು ಅನುಮತಿಸಬೇಕಿತ್ತು ಎಂದು 289 ಪುಟಗಳ ಸುದೀರ್ಘ ತೀರ್ಪಿನಲ್ಲಿ ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಎಸಿಬಿ ರಚನೆ ಮಾಡಿ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಹೆಚ್ಚಿನ ಅವಕಾಶವಿದೆ. ಎಸಿಬಿ ಮತ್ತು ವಿಚಕ್ಷಣಾ ಸಲಹಾ ಮಂಡಳಿಯು ರಾಜ್ಯ ಸರ್ಕಾರದ ನೇರ ಆಡಳಿತ ನಿಯಂತ್ರಣಕ್ಕೆ ಒಳಪಟ್ಟಿರುವುದರಿಂದ ಅವುಗಳು ಸ್ವತಂತ್ರವಾಗಿ ಕೆಲಸ ಮಾಡಲಾಗದು. ಇವುಗಳು ಅಂತಿಮವಾಗಿ ಮುಖ್ಯಮಂತ್ರಿಯ ನಿಯಂತ್ರಣಕ್ಕೆ ಒಳಪಡುತ್ತವೆ ಎಂದು ನ್ಯಾಯಾಲಯ ಹೇಳಿದೆ.

ಭಷ್ಟರ ರಕ್ಷಣೆಯ ಉದ್ದೇಶ: ಸರ್ಕಾರದ ಆದೇಶದ ಪ್ರಕಾರ ಮುಖ್ಯಮಂತ್ರಿಗೆ ಎಸಿಬಿಯ ತನಿಖೆ ಮತ್ತು ತನಿಖೆಯ ಅನುಮೋದನೆ ನೀಡುವ ಪರಮಾಧಿಕಾರವಿದೆ. ಇದು ಭ್ರಷ್ಟಾಚಾರ ನಿಗ್ರಹ ದಳದ ಉದ್ದೇಶವನ್ನೇ ವಿಫಲಗೊಳಿಸುತ್ತದೆ. ವಾಸ್ತವವಾಗಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯನ್ನು ಹತ್ತಿಕ್ಕುವುದಕ್ಕಾಗಿಯೇ ಎಸಿಬಿ ರಚಿಸಿರುವ ಸರ್ಕಾರ ಭ್ರಷ್ಟ ಅಧಿಕಾರಿಗಳು ಮತ್ತು ಸಚಿವರನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಿದೆ. ಆದ್ದರಿಂದ, ಸರ್ಕಾರದ ಆದೇಶ ಊರ್ಜಿತವಾಗದು ಎಂದು ಹೈಕೋರ್ಟ್ ಹೇಳಿದೆ. ಕೇವಲ ಕಾರ್ಯಾದೇಶದ ಮೂಲಕ ಎಸಿಬಿ ರಚನೆ ಮಾಡಲಾಗಿದೆಯೇ ಹೊರತು ಅದಕ್ಕೆ ಯಾವುದೇ ಶಾಸನಾತ್ಮಕ ಬೆಂಬಲವಿಲ್ಲ. ಹೀಗಿರುವಾಗ, ಕಾಲುಗಳಿಲ್ಲದೆ ಅಲುಗಾಡುವ ಎಸಿಬಿ ಪೊಲೀಸ್ ಕರ್ತವ್ಯವನ್ನು ನಿರ್ವಹಿಸಲು ಹೇಗೆ ಸಾಧ್ಯ? ಮುಖ್ಯಮಂತ್ರಿಗಳ ಅಧೀನದಲ್ಲಿ ಕಾರ್ಯನಿರ್ವಹಿಸುವ ತನಿಖಾಧಿಕಾರಿ ಪಾರದರ್ಶಕ ಅಥವಾ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವೇ ಎಂದು ಹೈಕೋರ್ಟ್ ಪ್ರಶ್ನೆ ಎತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net