ಅವಹೇಳನ ಮಾಡಿದರೆ ಪ್ರತ್ಯುತ್ತರ

devendrappa
ದೇವೆಂದ್ರಪ್ಪ
Published on

ಸಾಗರ: ಸಿಗಂದೂರು ಸೇತುವೆ ಚರ್ಚೆ ನೆಪದಲ್ಲಿ ನಮ್ಮ ನಾಯಕರಾದ ಬಿ.ವೈ.ರಾಘವೇಂದ್ರ, ಹರತಾಳು ಹಾಲಪ್ಪ ವಿರುದ್ಧ ಕೀಳುಮಟ್ಟದ ಪದ ಬಳಸಿದರೆ ಬಿಜೆಪಿ ಕಾರ್ಯಕರ್ತರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ ಎಚ್ಚರಿಸಿದರು.

ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಪ್ರಧಾನಿಯೇ ಬರಲಿ, ಟ್ರಂಪ್ ಅವರನ್ನೇ ಕರೆಯಲಿ ನಾನೇ ಅಧ್ಯಕ್ಷತೆ ವಹಿಸುತ್ತೇನೆ ಎಂದವರೇ ಗೈರಾಗಿರುವುದು ದುರದೃಷ್ಟಕರ ಸಂಗತಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ಹಿಂದೆ ಸೇತುವೆ ನಿರ್ಮಾಣ ಸಂದರ್ಭ ಶರಾವತಿ ನೀರು ಖಾಲಿ ಮಾಡಿ ಸೇತುವೆ ಕಟ್ಟುತ್ತಿದ್ದಾರೆ ಎಂದು ಅಡ್ಡಗಾಲು ಹಾಕಿದವರು ಇಂದು ಸೇತುವೆ ಬಗ್ಗೆ ಮಾತನಾಡುತ್ತಿದ್ದಾರೆ. ಕಳೆದ ಎರಡೂವರೆ ವರ್ಷದಲ್ಲಿ ಎಷ್ಟು ಅಭಿವೃದ್ಧಿಯಾಗಿದೆ. ನಮ್ಮ ನಾಯಕ ಹರತಾಳು ಹಾಲಪ್ಪ ಶಾಸಕರಾಗಿದ್ದ ಸಂದರ್ಭ ನಡೆದ ಅಭಿವೃದ್ಧಿ ಕೆಲಸಗಳೇನು ಎನ್ನುವುದನ್ನು ನಾವು ದಾಖಲೆ ಸಮೇತ ಚರ್ಚೆಗೆ ಬರಲು ಸಿದ್ಧರಿದ್ದೇವೆ. ಕಾಂಗ್ರೆಸ್‌ನವರು ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಸೇತುವೆ ವಿಷಯದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಏಕವಚನದಲ್ಲಿ ಕರೆದಿರುವುದು ಖಂಡನೀಯ. ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಚಂದ್ರಪ್ಪ ಹೇಳುತ್ತಾರೆ. ಆದರೆ ಅವರೇ ಸರ್ಕಾರಿ ಕಾರ್ಯಕ್ರಮದ ವೇದಿಕೆ ಮೇಲೆ ಕೂರುತ್ತಾರೆ. ಅವರಿಗೆ ಯಾವ ಅಧಿಕಾರ ಇದೆ ಎಂದು ಪ್ರಶ್ನಿಸಿದರು.

ಬರೀ ಸುಳ್ಳು: ಶಾಸಕರು ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ಸಾಧನೆ ಶೂನ್ಯ. ನಗರಸಭೆ ಸೇರಿ ಯಾವುದಕ್ಕೂ ಹಣ ತಂದಿಲ್ಲ. ಪ್ರತಿ ವಾರ್ಡ್‌ಗೆ 1 ಕೋಟಿ ರೂ. ತಂದಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಆರ್.ಗಣೇಶ್‌ಪ್ರಸಾದ್ ದೂರಿದರು. ಉಪವಿಭಾಗೀಯ ಆಸ್ಪತ್ರೆಗೆ 70 ಕೋಟಿ ರೂ. ಅನುದಾನ ಬಂದಿದೆ ಎಂದು ಹೇಳುತ್ತಿದ್ದಾರೆ. ಆದರೆ ಪ್ರಸ್ತಾವನೆ ಕಳಿಸಲಾಗಿದೆಯೇ ವಿನಃ ಹಣ ಬಿಡುಗಡೆಯಾಗಿಲ್ಲ. ಸೇತುವೆ ಉದ್ಘಾಟನೆಗೆ ಮುತ್ಸದ್ದಿ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರು ಭಾಗವಹಿಸಿ ಸಾರ್ಥಕದ ಮಾತುಗಳನ್ನಾಡಿದ್ದಾರೆ. ಆದರೆ ಪಿಡಬ್ಲುೃಡಿ ಸಚಿವರು ಬಂದು ವಾಪಸ್ ಹೋಗಿದ್ದೇಕೆ? ಈಗ ಕಾಲುಸಂಕ ನಿರ್ಮಾಣಕ್ಕೆ ಅನುದಾನ ಬಂದಿದ್ದಕ್ಕೆ ಸಂಭ್ರಮಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಈ ಹಿಂದೆ ಬಿಜೆಪಿಯಲ್ಲೆ ಇದ್ದವರು. ಕಾಮಗಾರಿಗಳ ಪಟ್ಟಿ ತಯಾರಿಸುವ ಹೊಣೆ ಅವರಿಗಿತ್ತು. ಆಗ ಹಾಲಪ್ಪ ಬೇರೆಯವರ ಕಾಮಗಾರಿ ತಾವು ಮಾಡಿದ್ದು ಎಂದು ಎಲ್ಲಿಯೂ ಹೇಳಿರಲಿಲ್ಲ. ಈಗ ಚೇತನರಾಜ್ ಯಾರನ್ನೋ ಓಲೈಸಲು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಕೆರೋಡಿಯಲ್ಲಿ ರೈತರ ಶುಂಠಿ ಬೆಳೆ ಅರಣ್ಯ ಇಲಾಖೆ ನಾಶ ಮಾಡಿದೆ. ರೈತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ಇಂತಹ ಗಂಭೀರ ವಿಷಯಗಳ ಬಗ್ಗೆ ಶಾಸಕರು ಗಮನ ಹರಿಸಲಿ ಎಂದರು.

ಪ್ರಮುಖರಾದ ಮೈತ್ರಿ ಪಾಟೀಲ್, ಸವಿತಾ ವಾಸು, ಡಾ. ರಾಜನಂದಿನಿ ಕಾಗೋಡು, ಪ್ರಶಾಂತ, ರಮೇಶ್, ಅಕ್ಷತಾ ಪ್ರಸನ್ನ, ಸತೀಶ್, ಅರುಣ ಕುಗ್ವೆ, ಬಿ.ಟಿ.ರವೀಂದ್ರ, ಗಿರೀಶ್ ಗೌಡ, ಸೂರಜ್, ಹರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net