

ಶಿವಮೊಗ್ಗ: ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ತಕ್ಷಣವೇ ರದ್ದು ಮಾಡುವುದು ಸೇರಿದಂತೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಭರವಸೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಆಗ್ರಹಿಸಿದರು.
ಭದ್ರಾವತಿ ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಗುರುವಾರ 41ನೇ ಹುತಾತ್ಮರ ದಿನ ಉದ್ಘಾಟಿಸಿ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಸರ್ಕಾರ ರಚನೆ ಮಾಡಿದೆ. ರಾಜ್ಯದಲ್ಲಿ ವಿಶೇಷವಾಗಿ ರೈತರು, ಕೃಷಿ ಕಾರ್ಮಿಕರು, ದುಡಿಯುವ ವರ್ಗದ ಜನರು, ಬಡವರು ಎಲ್ಲ ಜಾತಿಯ, ಧರ್ಮದ ಜನರು ಸರ್ಕಾರದ ಮೇಲೆ ಆಕಾಂಕ್ಷೆಗಳನ್ನು ಇಟ್ಟು ಮತ ಹಾಕಿ ಗೆಲ್ಲಿಸಿದ್ದಾರೆ. ಜನರಿಗೆ ಭರವಸೆ ಕೊಟ್ಟಂತೆ ಗ್ಯಾರಂಟಿ ಯೋಜನೆಗಳನ್ನು ತಕ್ಷಣವೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಏತ ನೀರಾವರಿ ಮತ್ತು ಬೃಹತ್ ನೀರಾವರಿ ಯೋಜನೆಗಳಿಗೆ ಹೆಚ್ಚು ಹಣ ಮೀಸಲಿಡುವುದು ಸೇರಿ ಇನ್ನು ಹಲವಾರು ಸಮಸ್ಯೆಗಳನ್ನು ಒಳಗೊಂಡ ರೈತರ ಪ್ರಣಾಳಿಕೆಯನ್ನು ಕರ್ನಾಟಕ ಸಂಯುಕ್ತ ಕಿಸಾನ್ ಹೋರಾಟ ಸಮಿತಿ ಸಭೆಯಲ್ಲಿ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ಗೆ ಕೊಡಲಾಗಿತ್ತು. ಈ ಸಭೆಯಲ್ಲಿ ಬಿಜೆಪಿಯಿಂದ ಯಾರೂ ಭಾಗವಹಿಸಿರಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ಪ್ರೊ. ರಾಧಾಕೃಷ್ಣ, ಕರ್ನಾಟಕದ ಉಸ್ತುವಾರಿ ಭಾಗವಹಿಸಿ ರೈತರ ಸಮಸ್ಯೆಗಳಿರುವ ಈ ಪ್ರಣಾಳಿಕೆ ಒಪ್ಪಿ ಈಡೇರಿಸುವುದಾಗಿ ಗ್ಯಾರಂಟಿ ಪತ್ರಕ್ಕೆ ಪಕ್ಷದ ಪರವಾಗಿ ಪ್ರೊ. ರಾಧಾಕೃಷ್ಣ ಅವರು ಸಹಿ ಹಾಕಿದ್ದರು. ಜೆಡಿಎಸ್‌ನಿಂದ ತಿಪ್ಪೇಸ್ವಾಮಿ ಅವರು ಪ್ರಣಾಳಿಕೆಯನ್ನು ಒಪ್ಪಿ ಸಹಿ ಹಾಕಿದ್ದಾರೆ. ನಮ್ಮ ಪ್ರಣಾಳಿಕೆಯಲ್ಲಿರುವ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು. ಜತೆಗೆ ಈ ಮುಂಗಾರು ಮಳೆಗೆ ಮನೆ ಹಾನಿ, ಬೆಳೆ ಹಾನಿ, ಜನ-ಜಾನುವಾರು ಸಾವನಪ್ಪಿದ್ದಾರೆ. ಇದಕ್ಕೆ ತಕ್ಷಣ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ, ಕಾರ್ಯಾಧ್ಯಕ್ಷ ಕೆ.ರಾಘವೇಂದ್ರ, ಕಾರ್ಯದರ್ಶಿ ಗುರುಶಾಂತ, ಹಸಿರುಸೇನೆ ಸಂಚಾಲಕ ಎಂ.ಡಿ ನಾಗರಾಜ್, ತಾಲೂಕು ಗೌರವಾಧ್ಯಕ್ಷ ಎಂ.ಎಚ್.ತಿಮ್ಮಪ್ಪ, ತಾಲೂಕು ಅಧ್ಯಕ್ಷ ಜಿ.ಎನ್.ಪಂಚಾಕ್ಷರಿ, ಕಾರ್ಯದರ್ಶಿ ಜಿ.ಬಿ.ರವಿ, ರೈತ ಮುಖಂಡರಾದ ನಾಗರಾಜ್, ಎನ್.ಡಿ.ಮಲ್ಲೇಶಪ್ಪ, ಶಿವರಾಜ್, ವೀರೇಶ್ ಹಾಗೂ ಗ್ರಾಮಸ್ಥರು ಇದ್ದರು.