ಪುನೀತ್ ಕೆರೆಹಳ್ಳಿ ಮೇಲಿನ ಗೂಂಡಾ ಕಾಯ್ದೆ ರದ್ದು; ಸರ್ಕಾರ ಕೊಟ್ಟ ಕಾರಣಗಳೇನು

punith
Published on

ಬೆಂಗಳೂರು: ರಾಷ್ಟ್ರ ರಕ್ಷಣಾ ಪಡೆ ಮುಖ್ಯಸ್ಥ ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲಾಗಿದ್ದ ಗೂಂಡಾ ಕಾಯ್ದೆಯನ್ನು ರದ್ಧುಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರ ಮೇರೆಗೆ ಭಾನುವಾರ ಪರಪ್ಪನ ಅಗ್ರಹಾರ ಜೈಲಿನಿಂದ ಪುನೀತ್ ಕೆರೆಹಳ್ಳಿ ಬಿಡುಗಡೆಯಾಗಿದ್ದಾರೆ.

ಜೆ.ಪಿ.ನಗರದಲ್ಲಿ ನೆಲೆಸಿರುವ ಹಾಸನ ಮೂಲದ ಪುನೀತ್ ಕೆರೆಹಳ್ಳಿ(32) ಮೇಲೆ 2013ರಿಂದ 2023ರವರೆಗೆ 10 ಪ್ರಕರಣಗಳು ದಾಖಲಾಗಿದ್ದವು. ಕ್ರಿಮಿನಲ್ ಚಟುವಟಿಕೆಗಳಲ್ಲಿ ಪದೇ ಪದೆ ಭಾಗಿಯಾದ ಆರೋಪದ ಮೇಲೆ ಪುನೀತ್ ಕರೆಹಳ್ಳಿ ವಿರುದ್ಧ ಸಿಸಿಬಿ ಪೊಲೀಸರು ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸಿ ಆಗಸ್ಟ್‌ನಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಇದನ್ನು ಪ್ರಶ್ನಿಸಿ ಪುನೀತ್ ಕೆರೆಹಳ್ಳಿ, ಹೈಕೋರ್ಟ್ ಮೊರೆ ಹೋಗಿದ್ದು, ವಿಚಾರಣೆಗಾಗಿ ರಾಜ್ಯ ಸರ್ಕಾರವು ಸಲಹಾ ಸಮಿತಿ ರಚಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ಸಮಿತಿ, ಬಂಧಿತ ಪುನೀತ್ ಕೆರೆಹಳ್ಳಿಯನ್ನು ಬಂಧನದಲ್ಲಿ ಇಡಲು ಸಾಕಷ್ಟು ಕಾರಣಗಳು ಇಲ್ಲ ಎಂದು ಅಭಿಪ್ರಾಯಪಟ್ಟು ಸೆ.13ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ಇದರ ಅನ್ವಯ ಸೆ.16ರಂದು ಒಳಾಡಳಿತ ಇಲಾಖೆಯ(ಕಾನೂನು ಸುವ್ಯವಸ್ಥೆ) ಸರ್ಕಾರದ ಅಧೀನ ಕಾರ್ಯದರ್ಶಿ, ಆರೋಪಿ ಪುನೀತ್ ಕೆರೆಹಳ್ಳಿಯನ್ನು ಬಂಧನ ಮುಕ್ತಗೊಳಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಆದೇಶ ಹೊರಡಿಸಿದ್ದಾರೆ. ಆದೇಶದ ಬೆನ್ನಲ್ಲೇ ಪುನೀತ್ ಕೆರೆಹಳ್ಳಿಯನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಸೆ.17ರ ಭಾನುವಾರ ಬಿಡುಗಡೆ ಮಾಡಲಾಗಿದೆ.

ಗೂಂಡಾ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಿದ ಮೊದಲ ಪ್ರಕರಣ ಇದಾಗಿದೆ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಮನಗರ ಜಿಲ್ಲೆಯ ಸಾತನೂರಿನ ಬಳಿ ಗೋ ಸಾಗಣೆ ಮಾಡುತ್ತಿದ್ದ ಜಾನುವಾರು ವ್ಯಾಪಾರಿ ಮಂಡ್ಯದ ಇದ್ರೀಸ್ ಪಾಷಾ ಎಂಬಾತನ ಮೇಲೆ ಹಲ್ಲೆ ನಡೆಸಿ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ ಆರೋಪ ಪುನೀತ್ ಕೆರೆಹಳ್ಳಿ ಮೇಲೆ ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net