

ಸೊರಬ: ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಮರುಪಾವತಿ ಮಾಡಿದಾಗ ಮಾತ್ರ ಸಂಘಗಳು ಉನ್ನತಿ ಹೊಂದಲು ಸಾಧ್ಯ ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷ ಎಲ್.ಸತ್ಯನಾರಾಯಣ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಶನಿವಾರ ಆಯೋಜಿಸಿದ್ದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ 5 ಲಕ್ಷ ರೂ.ವರೆಗೆ ವೇತನಾಧಾರಿತ ಸಾಲ ನೀಡಲಾಗುತ್ತಿದೆ. ಶಿಕ್ಷಕರ ಉಳಿತಾಯವನ್ನು ಉತ್ತೇಜಿಸಿ ಒಂದು ಕೋಟಿ ರೂ.ಗೂ ಅಧಿಕ ಠೇವಣಿ ಸಂಗ್ರಹಿಸಲಾಗಿದೆ. ಸಂಘ 23.12 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸಂಘವು ಈವರೆಗೂ ಸ್ವಂತ ಕಟ್ಟಡ ಹೊಂದಲು ಸಾಧ್ಯವಾಗಿಲ್ಲ. ಸ್ವಂತ ನಿವೇಶನ ಹೊಂದಲು ಮಹಾಸಭೆಯಲ್ಲಿ ಸರ್ವ ಸದಸ್ಯರ ಒಮ್ಮತದಿಂದ ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಇಒ ಆರ್.ಪುಷ್ಪಾ, ಸಮಾಜದಲ್ಲಿ ಶಿಕ್ಷಕ ವೃತ್ತಿ ಪವಿತ್ರವಾದುದು. ಶಿಕ್ಷಕರ ಆರ್ಥಿಕ ಸದೃಢತೆಗೆ ಸಹಕಾರ ಸಂಘಗಳಿಂದ ಅನುಕೂಲವಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಂಘದಲ್ಲಿ ಉತ್ತಮ ವ್ಯವಹಾರ ಮಾಡಿದ ಸದಸ್ಯರು, ನಿವೃತ್ತ ಶಿಕ್ಷಕರು, ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ಷೇರುದಾರರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ಮಂಜುನಾಥ್, ಕ್ಷೇತ್ರ ಸಮನ್ವಯಾಧಿಕಾರಿ ದಯಾನಂದ ಕಲ್ಲೇರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ. ಕೆ.ಸಿ.ಶ್ರೀಕಾಂತ್, ಪ್ರಮುಖರಾದ ಪರಮೇಶ್ವರಪ್ಪ, ಎನ್. ಗಣಪತಿ, ಜಗದೀಶ್ವರಪ್ಪ, ಎಸ್.ಆರ್.ಬಾಬು, ಸಿ.ಮಂಜಪ್ಪ, ಕೆಂಡಪ್ಪ ಗೌಡ, ಎಸ್.ಎನ್.ಗಣಪತಿ ಇತರರಿದ್ದರು.