ರೇಣುಕಸ್ವಾಮಿ ಹತ್ಯೆ ಚಿತ್ರರಂಗಕ್ಕೆ ಕಪ್ಪುಚುಕ್ಕೆ

skp VIRASHIVA
ರೇಣುಕಸ್ವಾಮಿ ಹತ್ಯೆ ಘಟನೆ ಖಂಡಿಸಿ ಶಿಕಾರಿಪುರ ತಾಲೂಕು ವೀರಶೈವ ಸಮಾಜ ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಎನ್.ವಿ.ಈರೇಶ್, ಕುಮಾರಸ್ವಾಮಿ ಹಿರೇಮಠ, ಶಿವಯ್ಯ ಶಾಸ್ತ್ರಿ, ಪುಟ್ಟಸ್ವಾಮಿ, ಶಶಿಧರ್ ಸ್ವಾಮಿ, ವೀರನಗೌಡ, ವಸಂತಗೌಡ ಇತರರಿದ್ದರು.
Published on

ಶಿಕಾರಿಪುರ: ಚಿತ್ರದುರ್ಗದ ರೇಣುಕಸ್ವಾಮಿ ಅವರ ಹತ್ಯೆ ಘಟನೆಯನ್ನು ಖಂಡಿಸಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಘನತೆ ಮತ್ತು ಗೌರವ ಇದೆ. ನಟ ದರ್ಶನ್ ಮತ್ತು ಅವರ ಗ್ಯಾಂಗ್ ಮಾಡಿದಂತಹ ಈ ಹೇಯ ಕೃತ್ಯದಿಂದ ಇಡೀ ಕನ್ನಡ ಚಿತ್ರರಂಗವೇ ತಲೆತಗ್ಗಿಸುವಂತಾಗಿದೆ. ಅಮಾಯಕನೊಬ್ಬನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಿರುವುದು ಅಕ್ಷಮ್ಯ ಎಂದು ಅಖಿಲ ಭಾರತ ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಎನ್.ವಿ.ಈರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಅಥವಾ ಯಾವುದೇ ನಾಯಕರಾಗಲಿ ಇಂತಹ ಹೀನ ಕೃತ್ಯ ಮಾಡಿದವರನ್ನು ಬೆಂಬಲಿಸಬಾರದು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ದರ್ಶನ್‌ನ ಕೃತ್ಯದಿಂದ ರೇಣುಕಸ್ವಾಮಿ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಆ ಮನೆಗೆ ದಿಕ್ಕೇ ಇಲ್ಲದಂತಾಗಿದೆ. ಮೂರು ತಿಂಗಳ ಗರ್ಭಿಣಿಯಾಗಿರುವ ರೇಣುಕಸ್ವಾಮಿಯ ಪತ್ನಿಯ ಗತಿಯೇನು? ತಪ್ಪಿತಸ್ಥರು ಮತ್ತೆಂದೂ ಇಂತಹ ಕೆಲಸಕ್ಕೆ ಕೈ ಹಾಕದಂತಹ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ವೀರಶೈವ ಸಮಾಜದ ಜಿಲ್ಲಾ ನಿರ್ದೇಶಕ ಕುಮಾರಸ್ವಾಮಿ ಹಿರೇಮಠ ಮಾತನಾಡಿ, ಈ ವಿಷಯದಲ್ಲಿ ಪೊಲೀಸ್ ಅಧಿಕಾರಿಗಳು ಮಾಡುತ್ತಿರುವ ತನಿಖೆಯಿಂದ ರೇಣುಕಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬಹುದೆಂಬ ಭರವಸೆ ಮೂಡಿದೆ. ನಿಷ್ಠಾವಂತ ಅಧಿಕಾರಿಗಳ ಮೇಲೆ ಯಾವ ಕಾರಣಕ್ಕೂ ಯಾರೂ ಒತ್ತಡ ತರಬಾರದು. ಅವರ ನಿಷ್ಪಕ್ಷಪಾತ ತನಿಖೆಯ ದಾರಿ ತಪ್ಪಿಸಬಾರದು ಎಂದು ಒತ್ತಾಯಿಸಿದರು.
ತಾಲೂಕು ಜಂಗಮ ಸಮಾಜದ ಅಧ್ಯಕ್ಷ ಪುಟ್ಟಸ್ವಾಮಿ, ಜಂಗಮ ಪುರೋಹಿತ ಸಂಘದ ಅಧ್ಯಕ್ಷ ಪ್ರಭುಸ್ವಾಮಿ, ಜಯ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಶಿವಯ್ಯ ಶಾಸ್ತ್ರಿ, ನೊಳಂಬ ವೀರಶೈವ ಸಮಾಜದ ಅಧ್ಯಕ್ಷ ಲೋಹಿತ್, ಡಿಎಸ್‌ಎಸ್‌ನ ಜಗದೀಶ್, ಕದಳಿ ವೇದಿಕೆಯ ಕಾಂಚನ ಕುಮಾರ್, ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷ ವೀರನಗೌಡ, ವಸಂತ ಗೌಡ, ಕವಲಿ ಶಿವಕುಮಾರ್ ಶಾಸ್ತ್ರಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಶಿಧರ ಸ್ವಾಮಿ, ಅಶ್ವಿನ್, ವೀರಶೈವ ಸಮಾಜದ ಪ್ರಮುಖರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net