

ದಾವಣಗೆರೆ: ನಾಪತ್ತೆಯಾಗಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ಹೊನ್ನಾಳಿ ಹೊರವಲಯದ ಹವೇಲಿ ಕಡದಕಟ್ಟೆ ಬಳಿ ತುಂಗಾ ಮೇಲ್ದಂಡೆ ನಾಲೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣದ ಸುತ್ತ ಹಲವು ಅನುಮಾನಗಳು ಮೂಡಿತ್ತು. ಅಪಹರಣ ಮಾಡಿ ಕೊಲೆ ಮಾಡಲಾಗಿದೆ, ಅಪಘಾತದಿಂದ ಸಾವು ಸಂಭವಿಸಿದೆ ಎಂಬೆಲ್ಲ ಮಾತುಗಳು ಕೇಳಿಬರುತ್ತಿದ್ದವು.
ಇದೀಗ ಶಾಸಕ ಎಂ.ಪಿ.ರೇಣುಕಾಚಾರ್ಯ ಚಂದ್ರುವಿನದ್ದು ಸಹಜ ಸಾವಲ್ಲ, ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ.
ಚಂದ್ರುವನ್ನು ಕೊಲೆ ಮಾಡಿದ ಬಳಿಕ ತುಂಗಾ ನಾಲೆಗೆ ತಂದು ಹಾಕಲಾಗಿದೆ. ಈ ಪ್ರಕರಣದ ಬಗ್ಗೆ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ. ಆರಂಭದಲ್ಲಿ ಚಂದ್ರು ಮೊಬೈಲ್ ಲೊಕೇಷನ್ ಬಗ್ಗೆ ನೀಡಿದ ಮಾಹಿತಿಯೇ ಬೇರೆ. ಬಳಿಕ ನೀಡಿದ ಮಾಹಿತಿಯೇ ಬೇರೆ. ನಾನೇ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇನೆ ಎಂದು ಹೇಳಿದರು.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಥಳಕ್ಕೆ ಬಂದು ಕಾರು ವೇಗವಾಗಿ ಬಂದಿದ್ದರಿಂದ ಅಪಘಾತವಾಗಿದೆ ಎಂದಿದ್ದಾರೆ. ಈ ಬಗ್ಗೆ ಅವರು ಸರ್ಕಾರಕ್ಕೆ ವರದಿ ನೀಡಬೇಕಾಗಿತ್ತು. ಆದರೆ ಪೊಲೀಸರು ವರದಿ ನೀಡುವುದು ಬಿಟ್ಟು, ಮಾಧ್ಯಮಕ್ಕೆ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ರೇಣುಕಾಚಾರ್ಯ ಅಸಮಾಧಾನ ಹೊರಹಾಕಿದ್ದಾರೆ.