

ನವದೆಹಲಿ: ವಯೋಸಹಜ ಆರೋಗ್ಯ ಸಮಸ್ಯೇಗಿಡಾಗಿ ಮುಂಬೈನ ಬ್ರೀಚ್ ಕ್ಯಾಂಡ್ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಉದ್ಯಮಿ ರತನ್ ಟಾಟಾ(86) ಬುಧವಾರ ರಾತ್ರಿ ವಿಧಿವಶರಾಗಿದ್ದಾರೆ. ಟಾಟಾ ಸನ್ಸ್ನ ಎಮಿರಿಟಸ್ ಚೇರ್ಮನ್ ಆಗಿದ್ದ ಟಾಟಾ ತಮ್ಮ ಪರಿಶ್ರಮದಿಂದಲೇ ಟಾಟಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದರು. ಜಾಗತಿಕ ಮಟ್ಟದಲ್ಲಿ ಭಾರತವನ್ನು ಟಾಟಾ ಹೆಸರಿನೊಂದಿಗೆ ಗುರುತಿಸುವಂತೆ ಮಾಡಿದ್ದರು. ಲಕ್ಷ ರೂ.ಗಳ ನ್ಯಾನೋ ಕಾರು ಸಹ ವಿಶ್ವ ರಾಷ್ಟ್ರಗಳ ಗಮನ ಸೆಳೆದಿತ್ತು. ಕಾರು ಖರೀದಿಸುವ ಬಡವನ ಆಸೆಯನ್ನು ಟಾಟಾ ನನಸು ಮಾಡಿದ್ದಾರೆಂಬ ಮಾತು ಕೇಳಿಬಂದಿದ್ದವು.
ಕೆಲದಿನಗಳಿಂದ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಟಾಟಾ ಸೋಮವಾರ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆ ಸೇರಿದ್ದರು. ಈ ವೇಳೆ ಅವರ ದೈಹಿಕ ಪರಿಸ್ಥಿತಿ ಹದಗೆಟ್ಟಿರುವುದಾಗಿ ಸುದ್ದಿ ಹರಿದಾಡಿತ್ತು. ಈ ಸಂಬಂಧ ರತನ್ ಟಾಟಾ ಅವರ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸ್ಪಷ್ಟನೆ ನೀಡಲಾಗಿತ್ತು. ವಯೋಸಹಜ ಕಾರಣಗಳಿಗಾಗಿ ತಪಾಸಣೆಗೊಳಪಟ್ಟಿದ್ದಾರೆ. ಆತಂಕಗೊಳ್ಳುವಂಥದ್ದೇನು ಇಲ್ಲ ಎಂದು ಹೇಳಲಾಗಿತ್ತು. ಆದರೆ ಬುಧವಾರ ಟಾಟಾ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು.
ಪದ್ಮವಿಭೂಷಣ: ರತನ್ ಟಾಟಾ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ 2008ರಲ್ಲಿ ಪದ್ಮವಿಭೂಷಣ ಪ್ರಶಸಿ ನೀಡಲಾಗಿತ್ತು.
ಯಶಸ್ವಿ ಉದ್ಯಮಿ: ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸವೀಸಸ್, ಟಾಟಾ ಟೀ, ಟಾಟಾ ತಂತ್ರಜ್ಞಾನ, ಟಾಟಾ ಟೆಲಿ ಸರ್ವೀಸಸ್, ಟಾಟಾ ಫೈನಾನ್ಸ್ ಸೇರಿ ರತನ್ ಟಾಟಾ ಹಲವು ಉದ್ಯಮಗಳನ್ನು ಕಟ್ಟಿ ಬೆಳೆಸಿದ್ದರು.