ದೇವಸ್ಥಾನಗಳಲ್ಲಿನ ಸಾಯಿಬಾಬಾ ಮೂರ್ತಿ ತೆರವು

sai baba
Published on

ವಾರಾಣಸಿ: ಉತ್ತರಪ್ರದೇಶದ ವಾರಾಣಸಿಯ ಹಲವು ದೇವಸ್ಥಾನಗಳಲ್ಲಿನ ಸಾಯಿಬಾಬಾ ಮೂರ್ತಿಗಳನ್ನು ತೆರವುಗೊಳಿಸಲಾಗಿದೆ. ‘ಸನಾತನ ರಕ್ಷಕ ದಳ’ಎಂಬ ಸಂಘಟನೆ ಅಭಿಯಾನವಾಗಿ ಕಾರ್ಯಾಚರಣೆ ನಡೆಸುತ್ತಿದೆ.

‘ಈಗಾಗಲೇ ಹತ್ತು ದೇವಸ್ಥಾನಗಳಲ್ಲಿನ ಸಾಯಿಬಾಬಾ ಮೂರ್ತಿ ತೆರವುಗೊಳಿಸಲಾಗಿದೆ, ಮುಂದಿನ ದಿನಗಳಲ್ಲಿ ಅಗಸ್ಱಕುಂಡ ಮತ್ತು ಭೂತೇಶ್ವರ ದೇವಸ್ಥಾನಗಳಲ್ಲೂ ಸಾಯಿಬಾಬಾ ಮೂರ್ತಿ ತೆರವುಗೊಳಿಸಲಾಗುವುದು. ವಾರಾಣಸಿ(ಕಾಶಿ)ಯಲ್ಲಿ ಕೇವಲ ಶಿವನ ಆರಾಧನೆ ಮಾತ್ರ ನಡೆಯಬೇಕು’ ಎಂದು ಸನಾತನ ರಕ್ಷಕ ದಳದ ಅಧ್ಯಕ್ಷ ಅಜಯ್ ಶರ್ಮಾ ಹೇಳಿದ್ದಾರೆ.

‘ಇಲ್ಲಿನ ಬಡಾ ಗಣೇಶ ದೇವಸ್ಥಾನದಲ್ಲಿ ಸಾಯಿಬಾಬಾ ಮೂರ್ತಿಯನ್ನು ತೆಗೆದು ದೇವಸ್ಥಾನದ ಹೊರಗಿನ ಆವರಣದಲ್ಲಿ ಇಡಲಾಗಿದೆ. ಶಾಸ್ತ್ರಗಳ ಪ್ರಕಾರ ಸಾಯಿಬಾಬಾ ಪೂಜೆ ನಿಷೇಧಿಸಲಾಗಿದೆ, ಆದರೂ ಸರಿಯಾದ ಜ್ಞಾನವಿಲ್ಲದೆ ಸಾಯಿಬಾಬಾರನ್ನು ಪೂಜಿಸಲಾಗುತ್ತಿದೆ’ ಎಂದು ದೇವಸ್ಥಾನದ ಪ್ರಧಾನ ಅರ್ಚಕ ರಾಮು ಗುರು ತಿಳಿಸಿದ್ದಾರೆ. ಅನ್ನಪೂರ್ಣ ದೇವಸ್ಥಾನದ ಮುಖ್ಯ ಅರ್ಚಕ ಶಂಕರ್ ಪುರಿ ಕೂಡ, ‘ಶಾಸ್ತ್ರಗಳಲ್ಲಿ ಸಾಯಿಬಾಬಾ ಪೂಜೆಯ ಉಲ್ಲೇಖವಿಲ್ಲ’ ಎಂದಿದ್ದಾರೆ.

ನಂಬಿಕೆ ಘಾಸಿಗೊಳಿಸುವ ಕೃತ್ಯ: ‘ಇಂದು ಸನಾತನಿ ಎಂದು ಹೇಳುವವರೇ ದೇವಸ್ಥಾನಗಳಲ್ಲಿ ಸಾಯಿಬಾಬಾ ಮೂರ್ತಿಗಳನ್ನು ಸ್ಥಾಪಿಸಿದವರು. ಅವರೇ ಈಗ ಮೂರ್ತಿಗಳನ್ನು ತೆರವುಗೊಳಿಸುತ್ತಿದ್ದಾರೆ. ಎಲ್ಲ ದೇವರೂ ಒಂದೇ, ದೇವರು ಯಾವ ರೂಪದಲ್ಲೂ ಇರಬಹುದು, ಇಂಥ ನಡೆ ಭಕ್ತರ ನಂಬಿಕೆಗಳನ್ನು ಘಾಸಿಗೊಳಿಸುತ್ತದೆ’ ಎಂದು ವಾರಾಣಸಿಯ ಸಂತ ರಘುವರ್ ದಾಸ್ ನಗರದ ಸಾಯಿ ಮಂದಿರದ ಅರ್ಚಕ ಸಮರ್ ಘೋಷ್ ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶಬರಿಮಲೆಯಲ್ಲಿ ತಿಲಕ ಹಚ್ಚಿಕೊಳ್ಳಲು ದರ ನಿಗದಿ

ಕಾಸರಗೋಡು: ಶಬರಿಮಲೆ ಯಾತ್ರೆಯಲ್ಲಿ ಎರುಮೇಲಿ ಪೇಟೆ ಶ್ರೀ ಶಾಸ್ತಾವು ಸನ್ನಿಧಾನದಲ್ಲಿ ಅಯ್ಯಪ್ಪ ವ್ರತಧಾರಿಗಳು ಮೈಗೆ ಬಣ್ಣ ಹಚ್ಚಿ, ಹಣೆಗೆ ಚಂದನವಿರಿಸಿ ಕುಣಿಯುತ್ತ ಸಾಗುವ ‘ಪೇಟ ತುಳ್ಳಲ್’ ಕಾರ್ಯ ಕ್ರಮಕ್ಕೆ ಬಣ್ಣಹಚ್ಚಿ ಚಂದನ ಬೊಟ್ಟು ಇರಿಸಲು ತಿರುವಾಂಕೂರು ದೇವಸ್ವಂ ಬೋರ್ಡ್ ಏಜೆನ್ಸಿಗಳನ್ನು ನೇಮಿಸಿ, ಭಕ್ತರಿಂದ ಹಣ ಸಂಗ್ರಹಿಸಲು ಮುಂದಾಗಿದೆ ಎಂಬ ಮಾಹಿತಿ ಅಯ್ಯಪ್ಪ ವ್ರತಧಾರಿಗಳನ್ನು ಅಸಮಾಧಾನಕ್ಕೆ ಈಡುಮಾಡಿದೆ. ಶ್ರೀ ಅಯ್ಯಪ್ಪ ಸ್ವಾಮಿ ಮಹಿಷಿಯನ್ನು ಸಂಹಾರಗೊಳಿಸಿದ ನೆನಪಿಗಾಗಿ ಭಕ್ತರು ಸ್ನಾನಮಾಡಿ ಬಣ್ಣಹಚ್ಚಿ, ತಿಲಕವಿರಿಸಿ ಪೇಟ ತುಳ್ಳಲ್ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಾರೆ. ಇದೀಗ ಹೊಸ ನಿರ್ದೇಶನದ ಪ್ರಕಾರ ನಿಗದಿತ ಕೇಂದ್ರಗಳಲ್ಲಿ ಹಣ ತೆತ್ತು ಬಣ್ಣ-ತಿಲಕ ಹಚ್ಚಿಕೊಳ್ಳಬೇಕಾಗಿದೆ. ಈ ಕ್ರಮವನ್ನು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ಸೇರಿ ವಿವಿಧ ಹಿಂದುಪರ ಸಂಘಟನೆಗಳು ಖಂಡಿಸಿದ್ದು, ತಕ್ಷಣ ಈ ಆದೇಶ ವಾಪಸ್ ಪಡೆಯುವಂತೆ ಆಗ್ರಹಿಸಿವೆ.

ತಿರುಪತಿ ಲಡ್ಡು ಕಲಬೆರಕೆ ಪ್ರಕರಣ ಎಸ್​ಐಟಿ ತನಿಖೆ ತಾತ್ಕಾಲಿಕ ಸ್ಥಗಿತ

ತಿರುಪತಿ: ತಿರುಮಲ ತಿರುಪತಿ ಶ್ರೀವೆಂಕಟೇಶ್ವರ ದೇವಸ್ಥಾನದ ಲಡ್ಡು ಕಲಬೆರಕೆ ಪ್ರಕರಣ ಸುಪ್ರೀಂಕೋರ್ಟ್ ವ್ಯಾಪ್ತಿಗೆ ಬಂದಿರುವುದರಿಂದ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ(ಎಸ್​ಐಟಿ)ದ ತನಿಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆಂಧ್ರಪ್ರದೇಶದ ಡಿಜಿಪಿ ದ್ವಾರಕಾ ತಿರುಮಲ ರಾವ್ ಮಂಗಳವಾರ ತಿಳಿಸಿದ್ದಾರೆ.

ಎಸ್​ಐಟಿ ಕಳೆದ 2 ದಿನಗಳಲ್ಲಿ ಸಂಗ್ರಹಣೆ ಹಾಗೂ ಮಾದರಿ ಪ್ರಕ್ರಿಯೆಗಳನ್ನು ತನಿಖೆ ಮಾಡಿದ್ದು, ಲಡ್ಡುಗಳನ್ನು ಕಲಬೆರಕೆ ಮಾಡಲು ಹೇಗೆ ಸಾಧ್ಯ ಎಂಬುದನ್ನೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಎಸ್​ಐಟಿ ಮೊದಲು ಪ್ರಕ್ರಿಯೆ ಅರ್ಥ ಮಾಡಿಕೊಳ್ಳಬೇಕು, ಅದನ್ನು ಅಧ್ಯಯನ ನಡೆಸಿ, ಎಲ್ಲ ಮಾಹಿತಿ ಕಲೆ ಹಾಕಬೇಕು. ಆದರೆ ಈ ನಡುವೆ ಸುಪ್ರೀಂಕೋರ್ಟ್ ಆದೇಶ ಬಂದಿದ್ದರಿಂದ ತನಿಖೆ ಸ್ಥಗಿತಗೊಳಿಸಲಾಗಿದೆ ಎಂದರು. ಅಲ್ಲದೆ, ಪ್ರಕರಣ ಸುಪ್ರೀಂಕೋರ್ಟ್​ನಲ್ಲಿ ಇರುವುದರಿಂದ ಅದರ ಬಗ್ಗೆ ಹೆಚ್ಚು ಮಾತನಾಡುವುದು ಸಮಂಜಸವಲ್ಲ ಎಂದರು. ಮುಂದಿನ ವಿಚಾರಣೆ ಅ.3ರಂದು ನಡೆಯಲಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net