ರೆಮ್​ಡೆಸಿವಿರ್ ಕಾಳದಂಧೆ; ಔಷಧ ಮಾಫಿಯಾ ಕಳ್ಳಾಟ, ಬಡವರ ಜೀವದ ಜತೆ ಚೆಲ್ಲಾಟ

IMG-20210519-WA0001
Published on

| ಶಿವಾನಂದ ತಗಡೂರು ಬೆಂಗಳೂರು

ಕರೊನಾ ಪೀಡಿತರ ಪಾಲಿಗೆ ಜೀವರಕ್ಷಕ ಎಂದು ನಂಬಲಾಗಿರುವ ರೆಮ್ೆಸಿವಿರ್ ಇಂಜೆಕ್ಷನ್​ನ ಕೃತಕ ಅಭಾವ ಸೃಷ್ಟಿಸುವ ಮೂಲಕ ಔಷಧ ಮಾಫಿಯಾ ಸಂಕಷ್ಟದ ಸಮಯದಲ್ಲೂ ಜನರ ಜೀವದ ಜತೆಗೆ ಚೆಲ್ಲಾಟವಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕರೊನಾ ಚಿಕಿತ್ಸೆಯಲ್ಲಿ ಬೇಡಿಕೆ ಗಿಟ್ಟಿಸಿಕೊಂಡಿರುವ ರೆಮ್ೆಸಿವಿರ್ ಇಂಜೆಕ್ಷನ್​ನ ಕೃತಕ ಅಭಾವ ಸೃಷ್ಟಿಸಿ, ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಸರ್ಕಾರಕ್ಕೆ ಗೊತ್ತಿಲ್ಲದ ಸಂಗತಿಯೇನಲ್ಲ. ನೆಪ ಮಾತ್ರಕ್ಕೆ ಕೆಲ ಪ್ರಕರಣಗಳನ್ನು ದಾಖಲು ಮಾಡಿದ್ದನ್ನು ಬಿಟ್ಟರೆ ದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆ ನಡೆದಿಲ್ಲ. ಎಲ್ಲವೂ ಮೇಲ್ಮಟ್ಟದ ‘ಹೊಂದಾಣಿಕೆ’ಯಲ್ಲಿ ಸಮಾಪ್ತಿಯಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿಯೇ ರೆಮ್ೆಸಿವಿರ್ ಉತ್ತಮ ಫಲಿತಾಂಶ ನೀಡಿತ್ತು. ಈ ಔಷಧಕ್ಕೆ ವಿಶ್ವಸಂಸ್ಥೆ ನಿರ್ಬಂಧ ಹೇರಿದ್ದರೂ, ಜನರು ಇದನ್ನು ಖರೀದಿಸಲು ಮುಗಿಬಿದ್ದರು. ಕೆಲವರು ಮೊದಲೇ ಖರೀದಿಸಿ ಮನೆಯಲ್ಲಿಟ್ಟುಕೊಂಡರು. ಪರಿಸ್ಥಿತಿ ದುರ್ಬಳಕೆ ಮಾಡಿಕೊಂಡ ಔಷಧ ಮಾಫಿಯಾ ಜತೆ ಔಷಧ ಉತ್ಪಾದಕರು, ಕಾರ್ಪೆರೇಟ್ ಆಸ್ಪತ್ರೆಗಳಿಂದ ಹಿಡಿದು ವಿಧಾನಸೌಧ ಪಡಸಾಲೆಯ ಪಟ್ಟಭದ್ರರ ತನಕ ಎಲ್ಲರೂ ಕೈಜೋಡಿಸಿ ನಿಂತಿದ್ದರಿಂದ ಪರಿಸ್ಥಿತಿ ಉಲ್ಬಣಗೊಂಡಿತು.

ರಾಜ್ಯಕ್ಕೆ 5.15 ಲಕ್ಷ ಸೀಸೆ: ರಾಜ್ಯ ಔಷಧ ನಿಯಂತ್ರಣಾಧಿಕಾರಿ ಕಚೇರಿಯ ಮಾಹಿತಿಯಂತೆ ರೆಮ್ೆಸಿವಿರ್ ಉತ್ಪಾದನೆ ಮಾಡುವ ಔಷಧದ ಕಂಪನಿಗಳಿಂದ ರಾಜ್ಯಕ್ಕೆ ಈ ತನಕ ಬಂದಿದ್ದು 5,15,552 ಸೀಸೆ (ವೈಯಲ್ಸ್). ಇದರಲ್ಲಿ 3,31,927 ಸೀಸೆಗಳು ಮುಕ್ತ ಮಾರು ಕಟ್ಟೆಗೆ ಬಿಡುಗಡೆ ಆಗಿವೆ. ಅಂದರೆ ಬಹುತೇಕ ವೈಯಲ್ಸ್​ಗಳು ಕಾರ್ಪೋರೇಟ್​ ಆಸ್ಪತ್ರೆಗಳ ಜಾಲ ಸೇರಿವೆ. ಇನ್ನುಳಿದ 1,83,623 ಸೀಸೆಗಳು ಮಾತ್ರ ಸರ್ಕಾರಿ ವ್ಯವಸ್ಥೆಗೆ ಬಂದಿವೆ. ಹಾಗಾಗಿ ಕಾರ್ಪೆ ರೇಟ್ ಆಸ್ಪತ್ರೆ ಹೊರತುಪಡಿಸಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಖಾಸಗಿ ಆಸ್ಪತ್ರೆಗಳಿಗೆ ಈ ಔಷಧ ಕೈಗೆಟುಕಲೇ ಇಲ್ಲ.

ಕೇಂದ್ರೀಕೃತ ವ್ಯವಸ್ಥೆ: ರೆಮ್​ಡೆಸಿವಿರ್​ ಔಷಧ ಹಾಹಾಕಾರ ಶುರುವಾದ ಮೇಲೆ ತಡವಾಗಿ ಎಚ್ಚೆತ್ತ ಸರ್ಕಾರ, ಮೆಡಿಕಲ್ ಸ್ಟೋರ್ಸ್​ಗಳಿಗೆ ನೀಡುವ ವ್ಯವಸ್ಥೆಗೆ ಕಡಿವಾಣ ಹಾಕಿದೆ. ಎಲ್ಲವೂ ಔಷಧ ನಿಯಂತ್ರಕರ ಮೂಲಕವೇ ಸರಬರಾಜಾಗಬೇಕು ಎಂದು ಕಟ್ಟಪ್ಪಣೆ ಹೊರಡಿಸಿತು. ಹಾಗಾಗಿ ಈಗ ಮುಕ್ತ ಮಾರುಕಟ್ಟೆಯಲ್ಲಿ ಈ ಔಷಧ ಲಭ್ಯವಿಲ್ಲ. ಯಾವುದೇ ಆಸ್ಪತ್ರೆಗಳು ತಮ್ಮಲ್ಲಿರುವ ಕೋವಿಡ್ ಸೋಂಕಿತರ ಮಾಹಿತಿ ನೀಡಿ, ಸರ್ಕಾರದಿಂದಲೇ ಔಷಧ ಪಡೆದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.

ಅಧಿಕಾರಿ ನಾಪತ್ತೆ!: ಕೋವಿಡ್ ನಿರ್ವಹಣೆ ನೋಡಲ್ ಅಧಿಕಾರಿಯಾಗಿ (ರೆಮ್​ಡೆಸಿವಿರ್​ ಔಷಧ ಜವಾಬ್ದಾರಿ) ನೇಮಕ ಮಾಡಿದ್ದ ಉಪ ಔಷಧ ನಿಯಂತ್ರಕರು ಕಚೇರಿಯಲ್ಲಿಯೂ ಲಭ್ಯರಿಲ್ಲ. ಪೋನ್ ಕರೆಗೂ ಸ್ಪಂದಿಸುತ್ತಿಲ್ಲ. ಆದ್ದರಿಂದ ಈ ಅಧಿಕಾರಿ ಕಾಣೆಯಾಗಿದ್ದು, ಹುಡುಕಿಕೊಡುವಂತೆ ಶಾಸಕ ರಿಜ್ವಾನ್ ಅರ್ಷದ್ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ.

ಔಷಧ ವ್ಯಾಪಾರಿಗಳ ಆಕ್ರೋಶ

ರೆಮ್​ಡೆಸಿವಿರ್​ ಔಷಧವನ್ನು ನೇರವಾಗಿ ಆಸ್ಪತ್ರೆಗಳಿಗೆ ಸರಬರಾಜು ಮಾಡಲು ಸರ್ಕಾರ ಕ್ರಮ ಕೈಗೊಂಡಿದ್ದರಿಂದಲೇ ಇದು ಕಾಳಸಂತೆಯಲ್ಲಿ ಮಾರಾಟವಾಗಲು ಕಾರಣ ಎಂದು ಕರ್ನಾಟಕ ಔಷಧ ವ್ಯಾಪಾರಿಗಳ ಮತ್ತು ವಿತರಕರ ಸಂಘದ ಅಧ್ಯಕ್ಷ ವಿ. ಹರಿಕೃಷ್ಣನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಔಷಧ ಕಂಪನಿಗಳ ಕೈವಾಡ

ಯಾವುದೇ ಔಷಧವನ್ನು ಔಷಧ ನಿಯಂತ್ರಕರ ನೀತಿ-ನಿಯಮಾವಳಿಗೆ ಒಳಪಟ್ಟು ಮಾರಾಟ ಮಾಡಬೇಕು ಎನ್ನುವ ನಿಯಮವಿದೆ. ಆದರೆ, ಔಷಧ ಕಂಪನಿಗಳು ಸರ್ಕಾರದ ಜೊತೆಗೆ ಕಳ್ಳಾಟ ನಡೆಸಿದ್ದಲ್ಲದೆ, ತಾವು ನಡೆದಿದ್ದೆ ದಾರಿ ಎಂಬ ರೀತಿ ವರ್ತಿಸಿದವು. ಸರ್ಕಾರಕ್ಕೆ ನೀಡಬೇಕಾಗಿದ್ದಷ್ಟು ಔಷಧವನ್ನು ಹಲವು ಕಂಪನಿಗಳೂ ನೀಡಲೇ ಇಲ್ಲ. ಬದಲಿಗೆ ಮುಕ್ತ ಮಾರುಕಟ್ಟೆ ನೆಪದಲ್ಲಿ ಕಾರ್ಪೆರೇಟ್ ಆಸ್ಪತ್ರೆಗಳಿಗೆ ಸರಬರಾಜು ಮಾಡಿ ಕಾಸು ಮಾಡಿಕೊಂಡವು. ಕೆಲ ಔಷಧ ಕಂಪನಿಗಳು ಸರ್ಕಾರಕ್ಕೆ ಸ್ಪಂದಿಸಿ ರೆಮ್​ಡೆಸಿವಿರ್ ನೀಡಿವೆ. ಸಿಪ್ಲಾ, ಹಿಟಾರಿಯೊ ಮತ್ತು ಕ್ಯಾಡಿಲಾ ಕಂಪನಿಗಳಿಗೆ ಹಲವು ಬಾರಿ ತಾಕೀತು ಮಾಡಿದ್ದರೂ, ಈ ತನಕ ಒಂದೇ ಒಂದು ಸೀಸೆ ಕೂಡ ನೀಡಿಲ್ಲ. ಅಚ್ಚರಿ ಅಂದರೆ ಸಿಪ್ಲಾ ಕಂಪನಿ 53860, ಹಿಟಾರಿಯೊ 1,43,250, ಕ್ಯಾಡಿಲಾ 400 ಸೀಸೆ ಉತ್ಪಾದನೆ ಮಾಡಿ ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಕಳೆದ ಕೋವಿಡ್ ಸಂದರ್ಭದಲ್ಲಿ ವಿವಾದಕ್ಕೆ ಸಿಲುಕಿದ್ದ ಮೈಸೂರಿನ ಜ್ಯುಬಿಲಿಯಂಟ್ ಕಂಪನಿ ಕೂಡ ಒಂದೂ ವೈಯಲ್ ಸರಬರಾಜು ಮಾಡಿರಲಿಲ್ಲ. ಈ ಬಗ್ಗೆ ಸರ್ಕಾರ ನೋಟೀಸ್ ಜಾರಿ ಮಾಡಿದ ಮೇಲೆ ಎಚ್ಚೆತ್ತುಕೊಂಡ ಕಂಪನಿ ಈಗಷ್ಟೆ, 30,400 ಸೀಸೆಗಳನ್ನು ಸರ್ಕಾರಕ್ಕೆ ಸರಬರಾಜು ಮಾಡಿದ್ದು, ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದೆ.

ನಿಜವಾಗಿ ಆಗಿದ್ದೇನು?

ಕೋವಿಡ್ 2ನೇ ಅಲೆ ನಿಭಾಯಿಸಲು ಇಷ್ಟು ರೆಮ್​ಸಿವಿರ್ ಔಷಧ ಬೇಕೆಂದು ಸರ್ಕಾರ ಅಂದಾಜು ಮಾಡಲಿಲ್ಲ. ಯಾವ ತಜ್ಞರ ಸಮಿತಿಯೂ ಈ ಬಗ್ಗೆ ಶಿಫಾರಸು ಕೂಡ ಮಾಡಲಿಲ್ಲ. ಯಾವಾಗ ಸೋಂಕಿತರ ಸಂಖ್ಯೆ ದಿನವೂ ಹೆಚ್ಚಳವಾಗುತ್ತಾ ಬಂತೊ ಆಗ, ರೆಮ್​ಸಿವಿರ್​ಗಾಗಿ ಎಲ್ಲ ಕಡೆ ಹಾಹಾಕಾರ ಶುರುವಾಯಿತು. ಇಂಥ ಸನ್ನಿವೇಶ ನಿರೀಕ್ಷಿಸಿದ್ದ ಔಷಧ ಮಾಫಿಯಾ ಕೃತಕ ಅಭಾವ ಸೃಷ್ಟಿಸಿತು.

ಕಾಳಸಂತೆಯಲ್ಲಿ ಮಾರಾಟ

ಕೃತಕ ಅಭಾವ ಸೃಷ್ಟಿಯಾದ ಮೇಲೆ ಅದರ ಲಾಭ ಪಡೆದುಕೊಳ್ಳಲು ಮತ್ತೊಂದು ವರ್ಗ ಸೃಷ್ಟಿಯಾಯಿತು. ಒಬ್ಬ ಸೋಂಕಿತನಿಗೆ 6 ಸೀಸೆ ಔಷಧ ನೀಡಬೇಕು ಎಂದು ತರಿಸಿಕೊಳ್ಳುವುದು. ಅದರಲ್ಲಿ ಸೋಂಕಿತನಿಗೆ ಮೂರು ಅಥವಾ ನಾಲ್ಕು ಸೀಸೆ ನೀಡಿ ಇನ್ನುಳಿದ ಸೀಸೆಗಳನ್ನು ಕಾಳಸಂತೆಗೆ ಕಳಿಸುವ ದಂಧೆ ಎಲ್ಲೆಡೆ ಅವ್ಯಾಹತವಾಗಿ ನಡೆಯಿತು. ಕೆಲ ಆಸ್ಪತ್ರೆಗಳು ಇದಕ್ಕೆ ಕೈ ಜೋಡಿಸಿದ್ದವು. ಈ ದಂಧೆಯಲ್ಲಿ ಅಟೆಂಡರ್, ಸ್ಟಾಫ್ ನರ್ಸ್​ಗಳಿಂದ ಹಿಡಿದು ವೈದ್ಯರ ತನಕ ಈ ಜಾಲ ಬೆಸೆದುಕೊಂಡಿದೆ. ಔಷಧದ ಮೂಲ ಬೆಲೆಗಿಂತ ಆರೇಳು ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡಿ ಕಾಸು ಮಾಡಿಕೊಂಡವರ ಸಂಖ್ಯೆಯೇ ಹೆಚ್ಚು.

ಅಪಾರ ಲಾಭ

ಕೃತಕ ಅಭಾವ ಸೃಷ್ಟಿ ಮಾಡಿದರೆ ಔಷಧವನ್ನು ದುಬಾರಿ ಬೆಲೆಗೆ ಮಾರಾಟ ಮಾಡಿ, ಲಾಭ ಮಾಡಿಕೊಳ್ಳಬಹುದು. ಈಗಾಗಲೇ ಜೀವರಕ್ಷಕ ಔಷಧಗಳ ಬೆಲೆ ಕೋವಿಡ್ ಸಂದರ್ಭದಲ್ಲಿ ಏರಿಕೆ ಆಗುತ್ತಲೇ ಇದೆ. ಬೆಲೆ ಎಷ್ಟಾದರೂ ಚಿಂತೆ ಇಲ್ಲ, ಔಷಧ ಸಿಕ್ಕರೆ ಸಾಕು ಎನ್ನುವ ಪರಿಸ್ಥಿತಿ ಸೃಷ್ಟಿ ಮಾಡುವುದು ಮೂಲ ಉದ್ದೇಶ. ಈ ಮಾಫಿಯಾ ಕಪಿ ಮುಷ್ಟಿಯಲ್ಲಿ ಸಿಲುಕಿ ನಲುಗಿದ ಜನ, ಜೀವ ಉಳಿಸಿಕೊಳ್ಳಲು ಅವರು ಹೇಳಿದ ಬೆಲೆಗೆ ಔಷಧ ಖರೀದಿ ಮಾಡಿದರು. 2 ಸಾವಿರ ರೂ. ಅಂದಾಜಿನಲ್ಲಿರುವ ಪ್ರತಿ ಸೀಸೆ, 10 ಸಾವಿರದಿಂದ 40 ಸಾವಿರ ರೂ. ತನಕ ಮಾರಾಟವಾಗಿದೆ. ಇದರಲ್ಲಿ ಮಧ್ಯವರ್ತಿಗಳು ಅಪಾರ ಲಾಭ ಮಾಡಿಕೊಂಡಿರುವುದು ಹಗಲು ಸತ್ಯ.

ಕಾಳಸಂತೆ ಕೋರರ ದಂಧೆ ನಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ರಾಜ್ಯ ಸರ್ಕಾರಕ್ಕೆ ತಿಳಿಸಿದ್ದೇನೆ. ಈ ದಂಧೆಗೆ ರಾಜ್ಯ ಸರ್ಕಾರವೇ ಪೊಲೀಸ್ ಮೂಲಕ ಕಡಿವಾಣ ಹಾಕಬೇಕು.

| ಡಿ.ವಿ.ಸದಾನಂದಗೌಡ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು

ನಮ್ಮವರೇ ಅಲ್ಲಿ ರಾಸಾಯನಿಕ ಸಚಿವರಾಗಿದ್ದಾರೆ. ರಾಜ್ಯಕ್ಕೆ ರೆಮ್​ಡೆಸಿವಿರ್ ಕೊಡಲು ಆಗುತ್ತಿಲ್ಲ. ಇನ್ನೂ ಕೂಡ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಬಿಜೆಪಿ ಶಾಸಕರೊಬ್ಬರು ರೆಮ್​ಡೆಸಿವಿರ್​ ಖರೀದಿ ಮಾಡಿ ಹಂಚಿದ್ದಾರೆ.

| ಕೃಷ್ಣಬೈರೇಗೌಡ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net