

ನವದೆಹಲಿ: ಕರೊನಾ ಸೋಂಕಿನ ಆರಂಭಿಕ ಚಿಕಿತ್ಸೆಯಲ್ಲಿ ವೈರಾಣುನಿರೋಧಕ ಚುಚ್ಚುಮದ್ದು ರೆಂಡೆಸಿವಿರ್ ಬಳಕೆಗೆ ಕೇಂದ್ರ ಸರ್ಕಾರ ಶನಿವಾರ ಹಸಿರು ನಿಶಾನೆ ತೋರಿದೆ. ಇದರ ಜತೆಗೆ ಎಚ್ಸಿಕ್ಯು ಮಾತ್ರೆಗಳನ್ನು ಕೂಡ ರೋಗಿಗಳಿಗೆ ಕೊಡುವಂತೆ ಸಲಹೆ ನೀಡಿದೆ.
ಈ ಔಷಧಗಳ ಜತೆಗೆ ಕನ್ವಲಸೆಂಟ್ ಪ್ಲಾಮಾ ಚಿಕಿತ್ಸೆಯನ್ನು ಕೂಡ ಕೊಡಲು ಸಮ್ಮತಿಸಿದೆ. ಸಂಪೂರ್ಣವಾಗಿ ಗುಣಮುಖರಾದ ಕೋವಿಡ್-19 ರೋಗಿಗಳಿಂದ ಪಡೆದುಕೊಂಡ ಪ್ಲಾಸ್ಮಾವನ್ನು, ಸ್ಟಿರಾಯ್ಡ್ಗಳನ್ನು ಕೊಟ್ಟರೂ ಚೇತರಿಸಿಕೊಳ್ಳದ ಆರಂಭಿಕ ಹಂತದ ಸೋಂಕಿತರಿಗೆ ವರ್ಗಾವಣೆ ಮಾಡಿ ಚಿಕಿತ್ಸೆ ನೀಡಲು ಮಾತ್ರ ಈ ಆದೇಶ ಸೀಮಿತವಾಗಿದೆ ಎಂದು ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ. ಈ ಹಿಂದಿನ ಮಾರ್ಗಸೂಚಿಯ ಪ್ರಕಾರ ತೀವ್ರವಾದ ಸೋಂಕಿನಿಂದ ಬಳಲುತ್ತಿರುವವರ ಚಿಕಿತ್ಸೆಗೆ ಎಚ್ಸಿಕ್ಯೂ ಮಾತ್ರೆಗಳನ್ನು ಕೊಡಬಹುದು ಎಂದು ಹೇಳಲಾಗಿತ್ತು.
ಆದರೆ ಈಗ ಆ್ಯಂಟಿಬಯಾಟಿಕ್, ಅಜಿತ್ರೋಮೈಸಿನ್ ಜತೆಗೆ ಎಚ್ಸಿಕ್ಯೂ ಮಾತ್ರೆಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ. ಇದರ ಜತೆಗೆ ರೋಗಿಗಳ ಹಿತದೃಷ್ಟಿಯಿಂದ ಇನ್ನಷ್ಟು ಸುರಕ್ಷತಾ ಕ್ರಮಗಳನ್ನು ಪ್ರತಿಪಾದಿಸಲಾಗಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಈ ಮಾತ್ರೆಯನ್ನು ಆರಂಭಿಕ ಹಂತದ ಚಿಕಿತ್ಸೆಯಲ್ಲಿ ಮಾತ್ರ ಬಳಸಬೇಕು. ಇದನ್ನು ಕೊಡುವ ಮುನ್ನ ರೋಗಿಗೆ ಕಡ್ಡಾಯವಾಗಿ ಇಸಿಜಿ ಮಾಡಿರಬೇಕು ಎಂದು ಹೇಳಲಾಗಿದೆ.