ಮನೋರೋಗಕ್ಕೆ ಚಿಕಿತ್ಸೆ ಪಡೆಯಲು ಹಿಂಜರಿಕೆ ಸಲ್ಲ

workshop
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಶಿವಮೊಗ್ಗದಲ್ಲಿ ಆಶಾ ಕಾರ್ಯಕರ್ತೆಯರಿಗೆ ಬುಧವಾರ ಏರ್ಪಡಿಸಿದ್ದ ಕಾರ್ಯಾಗಾರವನ್ನು ನ್ಯಾಯಾಧೀಶ ಎಂ.ಎಸ್.ಸಂತೋಷ್‌ಕುಮಾರ್ ಉದ್ಘಾಟಿಸಿದರು. ಡಾ. ಎಸ್.ಕೆ.ಕಿರಣ್, ಡಾ. ರಾಮಪ್ರಸಾದ್, ಡಾ.ನಟರಾಜ್, ಡಾ. ರಜನಿ ಪೈ ಇತರರಿದ್ದರು.
Published on

ಶಿವಮೊಗ್ಗ: ಜನ ಸಾಮಾನ್ಯರು ಮಾನಸಿಕ ರೋಗವನ್ನು ದೊಡ್ಡ ವಿಚಾರವಾಗಿ ಭಾವಿಸುತ್ತಾರೆ. ವೈದ್ಯರನ್ನು ಭೇಟಿಯಾದರೆ ಜನ ತನ್ನನ್ನು ಹುಚ್ಚ ಎಂದು ಭಾವಿಸುತ್ತಾರೆಂಬ ಭಯವೂ ಅನೇಕರಲ್ಲಿದೆ. ಇಂತಹ ತಪ್ಪು ಕಲ್ಪನೆಗಳನ್ನು ದೂರವಾಗಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್‌ಕುಮಾರ್ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಇಲಾಖೆ, ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಆಶಾ ಕಾರ್ಯಕರ್ತೆಯರಿಗೆ ಬುಧವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಆಶಾ ಕಾರ್ಯಕರ್ತೆಯರು ಮಾನಸಿಕ ಆರೋಗ್ಯದ ಕುರಿತು ಸಮಾಜಕ್ಕೆ ಅರಿವು ಮೂಡಿಸಲು ಕಾರ್ಯಾಗಾರ ಸಹಾಯಕವಾಗಿದೆ. ಮಾನಸಿಕ ಆರೋಗ್ಯದಲ್ಲಿ ಯಾವ ವೈದ್ಯಕೀಯ ಸೌಲಭ್ಯಗಳು ಸಿಗಲಿವೆ ಎಂಬುದನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಿಳಿಸಬೇಕಿದೆ. ತಾಯಿ-ಮಗುವಿನ ಮಾನಸಿಕ ಆರೋಗ್ಯದ ಬಗ್ಗೆ ಆಶಾ ಕಾರ್ಯಕರ್ತೆಯರು ಮಾಹಿತಿ ಒದಗಿಸಬೇಕು ಎಂದು ತಿಳಿಸಿದರು.
ಡಿಎಚ್‌ಒ ಡಾ.ನಟರಾಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾನಸಿಕ ಅನಾರೋಗ್ಯ ಹೆಚ್ಚುತ್ತಿದೆ. ಕೆಲಸ ಮಾಡುವ ಸ್ಥಳದಲ್ಲಿ ಎಲ್ಲರ ಮಾನಸಿಕ ಸ್ಥಿತಿ ಒಂದೆ ರೀತಿ ಇರುವುದಿಲ್ಲ. ಕೆಲವರು ಬಹುಬೇಗ ಒತ್ತಡಕ್ಕೆ ಒಳಗಾಗುತ್ತಾರೆ. ಅದಕ್ಕಾಗಿ ಕೇವಲ ಮಾನಸಿಕವಾಗಿ ಮಾತ್ರವಲ್ಲದೆ ವ್ಯಾಯಾಮ, ನಡಿಗೆ, ಯೋಗಾಭ್ಯಾಸ ಮಾಡುವುದು ಉತ್ತಮ ಎಂದರು.
ಸಿಮ್ಸ್ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ರಾಮಪ್ರಸಾದ್ ಮಾತನಾಡಿ, ದೇಹವನ್ನು ನಿಯಂತ್ರಿಸುವ ಮಿದುಳಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಮಾನಸಿಕ ಆರೋಗ್ಯ ಕೇಂದ್ರ ಸ್ಥಾಪನೆಯಾಗಿದ್ದು, ಉತ್ತಮ ಚಿಕಿತ್ಸೆ ದೊರೆಯುತ್ತದೆ ಎಂಬುದನ್ನು ಜನರಿಗೆ ತಿಳಿಸಬೇಕಿದೆ ಎಂದರು.
ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಎಸ್.ಕೆ.ಕಿರಣ್ ಮಾತನಾಡಿ, ಮಾನಸಿಕ ರೋಗಿಯನ್ನು ಸಮಾಜ ನೋಡುವ ರೀತಿಯೇ ಬೇರೆ ಎಂಬ ಕಲ್ಪನೆ ದೂರವಾಗಿಸಿಕೊಳ್ಳಬೇಕು. ವೈದ್ಯರ ಬಳಿ ಸಮಸ್ಯೆಯನ್ನು ಮುಕ್ತವಾಗಿ ಹೇಳಿಕೊಂಡರೆ ಪರಿಹಾರ ಕಂಡುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಶಿವಮೊಗ್ಗ ತಾಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್, ಜಿಲ್ಲಾ ಮನೋವೈದ್ಯ ಡಾ. ಪ್ರಮೋದ್, ಕಟೀಲ್ ಆಶೋಕ್ ಪೈ ಸ್ಮಾರಕ ಕಾಲೇಜಿ ಪ್ರಾಚಾರ್ಯೆ ಡಾ. ಸಂಧ್ಯಾ ಕಾವೇರಿ, ಶಿಕಾರಿಪುರದ ಮನೋವೈದ್ಯ ಡಾ. ಸಂಜಯ್, ಕೆಎಪಿಎಂಸಿ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಅರ್ಚನಾ ಕೆ. ಭಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net