

ಸೊರಬ: ಜಡೆ ಸಂಸ್ಥಾನ ಮಠದ ಜತೆಗೆ ನಾಡಿನಾದ್ಯಂತ ನೂರಾರು ಮಠಗಳನ್ನು ಸ್ಥಾಪಿಸಿ ಧಾರ್ಮಿಕ ಕ್ರಾಂತಿ ಮಾಡಿದವರು ಸಿದ್ಧವೃಷಭೇಂದ್ರ ಸ್ವಾಮೀಜಿ ಎಂದು ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ಜಡೆ ಸಂಸ್ಥಾನದ ಶಾಖಾಮಠದ ಕೂಸನೂರು ಶ್ರೀ ಶಿವಪೂಜಪ್ಪನ ಮಠದ ಆವರಣದಲ್ಲಿ ಗುರುವಾರ ಶ್ರೀ ಮಠದ ಹಾಗೂ ಸಭಾಭವನದ ಭೂಮಿಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಕೂಸನೂರಿನ ಶಿವಪೂಜಪ್ಪ ಮಠದ ಅಭಿವೃದ್ಧಿ ಕಾಮಗಾರಿಗೆ 50 ಲಕ್ಷ ರೂ. ಅನುದಾನ ಮಂಜೂರಾಗಿದ್ದು, 12 ಲಕ್ಷ ರೂ. ಬಿಡುಗಡೆಯಾಗಿದೆ. 16ನೇ ಶತಮಾನದಲ್ಲಿ ಜಡೆ ಸಂಸ್ಥಾನ ಮಠದ ಸಿದ್ಧವೃಷಭೇಂದ್ರ ಸ್ವಾಮೀಜಿ ಅವರು ಶಿವಪೂಜಪ್ಪನವರ ತಪಸ್ಸು, ಕಾರ್ಯಗಳನ್ನು ಗುರುತಿಸಿ ಕೂಸನೂರಿನಲ್ಲಿ ಮಠ ಕಟ್ಟಿಸಿಕೊಟ್ಟಿದ್ದರು ಎಂದು ತಿಳಿಸಿದರು.
ಜನರ ಧಾರ್ಮಿಕ ಕೈಂಕರ್ಯಗಳಿಗೆ ಸಹಕಾರ ನೀಡುವ ಚಿಂತನೆಯಿಂದ ಶಿವಪೂಜಪ್ಪ ಮಠದ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಜಡೆ ಸಂಸ್ಥಾನ ಮಠದ ಅಭಿವೃದ್ಧಿಗೆ ಎಲ್ಲ ಪಕ್ಷದ ಜನಪ್ರತಿನಿಧಿಗಳ ಸಹಕಾರ ಹಿರಿದಾಗಿದೆ. ಕೂಸನೂರಿನಲ್ಲಿ ಭಕ್ತರಿಗೆ ಅನುಕೂಲವಾಗಲು ಸುವ್ಯವಸ್ಥಿತ ಸಭಾಭವನ ನಿರ್ಮಿಸಲು ಶಾಸಕರು ವಿಶೇಷ ಅನುದಾನ ನೀಡಬೇಕು.ಡಾ. ಮಹಾಂತ ಸ್ವಾಮೀಜಿಜಡೆ ಸಂಸ್ಥಾನ ಮಠ
ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ನಮ್ಮ ಸಂಸ್ಕೃತಿ ಪರಂಪರೆ ಇತಿಹಾಸ ಗಮನಿಸಿದಾಗ ಮಠಗಳು ಜಾಗೃತಿ ಮೂಡಿಸುವ ಮೂಲಕ ಸಂಸ್ಕೃತಿ ಉಳಿಸುವ ಪ್ರಯತ್ನ ಮಾಡಿವೆ. ಮಠಗಳು ಪೂಜೆ, ಧಾರ್ಮಿಕ ಸಭೆಗಳ ಮೂಲಕ ಮನಸ್ಸು ಶುದ್ಧಗೊಳಿಸಿ ಜತೆಗೆ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಉಂಟುಮಾಡಿವೆ ಎಂದು ಹೇಳಿದರು.
ಜಡೆ ಸಂಸ್ಥಾನ ಮಠದ ಶ್ರೀ ಕುಮಾರಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ, ಘೋಡಗೆರೆ ವಿರಕ್ತಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಕೂಸನೂರು ತಿಪ್ಪಯ್ಯಸ್ವಾಮಿ ಆಶ್ರಮದ ಶ್ರೀ ಜ್ಯೋತಿರ್ಲಿಂಗಾನಂದ ಸ್ವಾಮೀಜಿ ಉಪಸ್ಥಿತರಿದ್ದರು. ಮಾಜಿ ಶಾಸಕ ಶಿವರಾಜ ಸಜ್ಜನರ, ಗ್ರಾಪಂ ಅಧ್ಯಕ್ಷ ವೀರಭದ್ರಪ್ಪ ಗುಡ್ಡಪ್ಪ ಪಾಟೀಲ, ಉಪಾಧ್ಯಕ್ಷ ಪ್ರಕಾಶಗೌಡ ವೀರನಗೌಡ ಪಾಟೀಲ, ಸದಸ್ಯರಾದ ಉಮೇಶ್ ಗದ್ದಿ ವಿನಾಯಕ, ಶಿಲ್ಪಾ ಹನುಮಂತಪ್ಪ, ಸವಿತಾ ಉಮೇಶ್, ಶಾಂತಾ ನಾಗರಾಜ, ರಾಜು ಜಡೆ, ಪಿಡಿಒ ಜಿ.ಟಿ.ಮುನಿ, ಇಂಜಿನಿಯರ್ ಮಲ್ಲೇಶಪ್ಪ ಬಳೆಗಾರ್, ಗ್ರಾಪಂ ಸದಸ್ಯರು, ಭಕ್ತರು ಹಾಗೂ ಗ್ರಾಮಸ್ಥರಿದ್ದರು.