

ಹೊಳೆಹೊನ್ನೂರು: ಸನಾತನ ಧರ್ಮವನ್ನು ನಾಶಮಾಡಲು ಯಾವ ದಾಳಿಕೋರರಿಂದಲೂ ಸಾಧ್ಯವಿಲ್ಲ ಎಂದು ವಾಗ್ಮಿ ಹಾರಿಕಾ ಮಂಜುನಾಥ್ ಹೇಳಿದರು.
ಮೈದೊಳಲು ಗ್ರಾಮದಲ್ಲಿ ಗಣೇಶೋತ್ಸವದ ಪ್ರಯುಕ್ತ ಆಯೋಜಿಸಿದ್ದ ಧಾರ್ಮಿಕ ಪ್ರವಚನದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಗಣಪತಿ ಪೆಂಡಾಲ್‌ಗಳಿಂದ ಹಿಂದುಗಳು ಜಾಗೃತರಾಗಬೇಕು ಎಂದರು.
ಹಿಂದು ಸಮಾಜದ ಸದ್ಯದ ಪರಿಸ್ಥಿತಿ ನೆನದರೆ ಮುಂದಿನ ದಿನಗಳು ಭಯಾನಕವಾಗಿವೆ. ನಿರಂತರವಾಗಿ ನರಮೇಧಗಳು ನಡೆಯುತ್ತಲೇ ಇವೆ. ಮೊದಲು ನಾವು ಜಾಗೃತರಾಗಬೇಕು. ಧರ್ಮ, ದೇಶ ಸೇವೆಗಳಿಂದ ನಮಗೇನು ಲಾಭ ಎಂಬ ನಿರ್ಲಕ್ಷ್ಯ ಧೋರಣೆಯಿಂದ ಧರ್ಮಕ್ಕೆ ಪೆಟ್ಟು ಬೀಳುತ್ತಿದೆ ಎಂದು ತಿಳಿಸಿದರು.
ರಾಮ ನಾಮಕ್ಕೆ, ಜಪಕ್ಕೆ ಹಿನ್ನಡೆಯಿಲ್ಲ. 500 ವರ್ಷಗಳ ರಾಮ ಜನ್ಮಭೂಮಿಯಲ್ಲಿ ಶ್ರಮದ ಪ್ರತಿಲಕ್ಕೆ ರಾಮ ಮಂದಿರ ಜೀವಂತ ಸಾಕ್ಷಿಯಾಗಿ ಉಳಿದಿದೆ. ಪ್ರತಿ ತಾಯಿಯೂ ಜೀಜಾಬಾಯಿಯಂತೆ ಆಗಬೇಕು. ಛತ್ರಪತಿ ಶಿವಾಜಿ ಮಹಾರಾಜರ ಕೊನೆಯ ಉಸಿರು ಸನಾತನ ಧರ್ಮಕ್ಕೆ ಅರ್ಪಣೆಯಾಗಿದೆ. ಮುಂದಿನ ಪೀಳಿಗೆಯ ಮಕ್ಕಳಲ್ಲಿ ಆಧ್ಯಾತ್ಮಿಕ ಜ್ಞಾನ ಬೆಳೆಯಬೇಕು. ಹೆಣ್ಣು ಮಕ್ಕಳು ನಮ್ಮ ಧಾರ್ಮಿಕ ಪರಂಪರೆಯನ್ನು ಅರ್ಥೈಸಿಕೊಳ್ಳಬೇಕು. ಹೆಣ್ಣು ಮಕ್ಕಳು ಜಾಗೃತರಾದರೆ ಧರ್ಮ ರಕ್ಷಣೆ ಸಾಧ್ಯ ಎಂದರು.
ಸಂಘಟಿತ ಭಾವ ಇಲ್ಲವೆಂದರೆ ದೇಶ, ಧರ್ಮ ಉಳಿಯುವುದು ಕಷ್ಟ. ಪರಕೀಯರ ಜಾತಿ ವ್ಯವಸ್ಥೆ ಮೀರಿ ಬೆಳೆಯುವ ಶಕ್ತಿ ಹಿಂದು ಧರ್ಮಕ್ಕಿದೆ. ರಾಮ ಮಂದಿರದಲ್ಲಿ ಸರ್ವ ಧರ್ಮೀಯರು ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ಭಾರತದ ಪ್ರತಿಯೊಂದು ಮನೆ ಅಯೋಧ್ಯೆ ಆಗಬೇಕು. ನಮ್ಮವರೇ ಹೇಳುತ್ತಾರೆ ರಾಮ ಹುಟ್ಟಿಲ್ಲ, ಕಾಲ್ಪನಿಕ ಎಂದು. ರಾಮ ವಂಶವೃಕ್ಷ ಮಕ್ಕಳ ಮನಸಿನಲ್ಲಿ ಬೇರೂರಬೇಕು. ಪ್ರತಿ ಮನೆ, ಮನಗಳಲ್ಲಿ ಜಾಗೃತಿ ಉಂಟಾದರೆ ಸನಾತನ ಧರ್ಮವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಹಾರಿಕಾ ಮಂಜುನಾಥ್ ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಹನುಮಂತು, ಗ್ರಾಮ ಸಮಿತಿ ಅಧ್ಯಕ್ಷ ಚಂದ್ರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶ್, ಮುಖಂಡ ಡಿ.ಮಂಜುನಾಥ್, ಎಸ್.ಶ್ರೀನಿವಾಸ್, ಸುಬ್ರಹ್ಮಣಿ, ಟಿ.ಆರ್.ಕೃಷ್ಣೋಜಿರಾವ್, ಯಲ್ಲೋಜಿರಾವ್, ಪಿ.ಎಸ್.ಕಿರಣ್‌ಕುಮಾರ್, ಆರ್.ಟಿ. ನಂದೀಶ್, ಮಂಜುನಾಥ್ ಗೌಡ, ಜಯಪ್ಪ, ಸುನೀಲ್, ದರ್ಶನ್, ಟಿ.ಜೆ.ರವಿ ಇತರರಿದ್ದರು.