ಎರಡು ತಿಂಗಳಿಗೊಮ್ಮೆ ಧರ್ಮ ಜಾಗೃತಿ ಸಮಾವೇಶ

bdvt veershaiva
ಭದ್ರಾವತಿ ತಾಲೂಕಿನ ಬಿಳಿಕಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ಶಿವಾಚಾರ್ಯರ ಸದ್ಬೋಧನಾ ಪಾದಯಾತ್ರೆ, ವಿಭೂತಿ-ರುದ್ರಾಕ್ಷಿ ಧಾರಣಾ ಕಾರ್ಯಕ್ರಮಕ್ಕೆ ಹೊಸನಗರದ ಮಳಲಿಮಠ ಹಾಗೂ ಬಿಳಿಕಿ ಹಿರೇಮಠದ ಶ್ರೀಗಳು ಚಾಲನೆ ನೀಡಿದರು. ಶಿವಮೊಗ್ಗ ಚಿಕ್ಕಮಗಳೂರು ಸೇರಿ ವಿವಿಧ ಮಠಗಳ ಮಠಾಧೀಶರು ಭಾಗವಹಿಸಿದ್ದರು.
Published on

ಭದ್ರಾವತಿ: ತಾಲೂಕಿನ ಬಿಳಿಕಿ ಗ್ರಾಮದಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಆಶ್ರಯದಲ್ಲಿ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಮಂಗಳೂರು ಜಿಲ್ಲಾ ಘಟಕಗಳ ವೀರಶೈವ ಲಿಂಗಾಯತ ಶಿವಾಚಾರ್ಯರ ಸದ್ಬೋಧನಾ ಪಾದಯಾತ್ರೆ, ವಿಭೂತಿ-ರುದ್ರಾಕ್ಷಿ ಧಾರಣಾ ಕಾರ್ಯಕ್ರಮ ನಡೆಯಿತು.

ವಿಭೂತಿ ಹಾಗೂ ರುದ್ರಾಕ್ಷಿ ಧಾರಣೆ ನಂತರ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಭೆ ನಡೆಸಲಾಯಿತು. ಸಭೆಯಲ್ಲಿ ಸಂಸ್ಥೆಯ ಜಿಲ್ಲಾಧ್ಯಕ್ಷ ಮಳಲಿ ಮಠದ ಶ್ರೀಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಲವು ನಿರ್ಣಯ ಅಂಗೀಕರಿಸಲಾಯಿತು.

ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲಗಳ ಬಗ್ಗೆ ವೀರಶೈವ ಲಿಂಗಾಯತರಲ್ಲಿ ಧರ್ಮ ಜಾಗೃತಿ ಮೂಡಿಸುವುದರ ಜತೆಗೆ ಪಂಚಪೀಠಗಳ ಇತಿಹಾಸದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಬಸವಾದಿ ಶಿವಶರಣರ ಬಗ್ಗೆ ಹಾಗೂ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಚಿಂತನೆಗಳನ್ನು ಸಮಾಜಕ್ಕೆ ತಿಳಿಯಪಡಿಸುವ ಬಗ್ಗೆ ಚರ್ಚಿಸಲಾಯಿತು.

ಪ್ರತಿ ಎರಡು ತಿಂಗಳಿಗೊಮ್ಮೆ ಎಲ್ಲ ಜಿಲ್ಲೆಗಳಲ್ಲಿ ಶಿವಾಚಾರ್ಯ ಸಂಸ್ಥೆಯ ಸಭೆ ನಡೆಸಿ ಧರ್ಮ ಜಾಗೃತಿ ಮೂಡಿಸುವುದು, ಜಿಲ್ಲಾ, ಮಹಾನಗರ, ತಾಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ವರ್ಷದುದ್ದಕ್ಕೂ ಧರ್ಮಜಾಗೃತಿ ಸಮಾವೇಶ ಸಂಘಟಿಸುವುದು ಮತ್ತು ಸಾಂದರ್ಭಿಕವಾಗಿ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ದೀಕ್ಷೆ ನೀಡುವ ಬಗ್ಗೆ ನಿರ್ಣಯಿಸಲಾಯಿತು.

ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ರಾಜ್ಯ ಸಹಕಾರ್ಯದರ್ಶಿ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಮಳಲಿ ಮಠದ ಸ್ವಾಮೀಜಿ, ಚಿಕ್ಕಮಗಳೂರು ಹುಣಸಘಟ್ಟ ಸ್ವಾಮೀಜಿ, ಕಬ್ಬಿಣಕಂತಿ ಮಠದ ಸ್ವಾಮೀಜಿ ಸೇರಿ ಹಲವು ಪೂಜ್ಯರೊಂದಿಗೆ ಬಿಳಿಕಿ ಗ್ರಾಮದ ಮನೆಮನೆಗೂ ಪಾದಯಾತ್ರೆ ಮೂಲಕ ತೆರಳಿ ವಿಭೂತಿ ಹಾಗೂ ರುದ್ರಾಕ್ಷಿ ಧಾರಣೆ ಮಾಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net