ಅಮೆಜಾನ್​ಗೆ ಪೈಪೋಟಿಯಲ್ಲ, ಪಾಲು ಕೊಡ್ತಿದಾರೆ ಅಂಬಾನಿ; 1.46 ಲಕ್ಷ ಕೋಟಿ ಹೂಡಿಕೆಗೆ ಮಾತುಕತೆ...!

mukesh ambani
Published on

ಮುಂಬೈ: ಮುಖೇಶ್​ ಅಂಬಾನಿಯ ರಿಲಯನ್ಸ್​ ಇಂಡಸ್ಟ್ರೀ, ರಿಲಯನ್ಸ್​ ರಿಟೇಲ್​ ವೆಂಚರ್ಸ್​, ಜಿಯೋ ಪ್ಲಾಟ್​ಫಾರ್ಮ್ಸ್​ಗೆ ಸಾವಿರಾರು ಕೋಟಿ ರೂ. ಹೂಡಿಕೆ ಹರಿದು ಬರ್ತಾಯಿದೆ. ಕೆಲ ದಿನಗಳ ಹಿಂದಷ್ಟೇ ಅಮೆರಿಕದ ಸಿಲ್ವರ್​ ಲೇಕ್​ ಕಂಪನಿ ಒಂದು ಬಿಲಿಯನ್​ ಡಾಲರ್​ ( ಅಂದಾಜು 7,400 ಕೋಟಿ ರೂ.) ಹೂಡಿಕೆ ಮಾಡಿತ್ತು.

ಇತ್ತೀಚೆಗಷ್ಟೇ ಕಿಶೋರ್​ ಬಿಯಾನಿ ಒಡೆತನದ ಫ್ಯೂಚರ್​ ಗ್ರೂಪ್​ನ ರಿಟೇಲ್​ ವ್ಯವಹಾರವನ್ನು 24 ಸಾವಿರ ಕೋಟಿ ರೂ.ಗಳಿಗೆ ತನ್ನ ತೆಕ್ಕೆಗೆ ತೆಗೆದುಕೊಂಡಿರುವ ರಿಲಯನ್ಸ್​, ರಿಟೇಲ್​ ಕ್ಷೇತ್ರದಲ್ಲಿ ಅಮೆಜಾನ್​ಗೆ ಭಾರಿ ಪೈಪೋಟಿ ನೀಡಲಿದೆ ಎಂದೇ ಹೇಳಲಾಗಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳು ಬೇರೆಯದೇ ಕಥೆ ಹೇಳುತ್ತಿವೆ.

ರಿಲಯನ್ಸ್​ನಲ್ಲಿ ಅಮೆಜಾನ್​ ಭಾರಿ ಮೊತ್ತದ ಬಂಡವಾಳ ಹೂಡಲು ಮುಂದಾಗುತ್ತಿದೆ. ಅಂದಾಜು 1.46 ಲಕ್ಷ ಕೋಟಿ ರೂ. ಹೂಡಿಕೆಯಾಗಲಿದ್ದು, ಪ್ರತಿಯಾಗಿ ಅಮೆಜಾನ್​ ಮುಖ್ಯಸ್ಥ ಜೆಫ್​ ಬಿಜೋಸ್​ಗೆ ರಿಲಯನ್ಸ್​ ರಿಟೇಲ್​ನಲ್ಲಿ ಅಂದಾಜು ಶೇ.40 ಒಡೆತನ ಬಿಟ್ಟು ಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಲೆಕ್ಟ್ರಿಕ್​ ಕಾರು ತಯಾರಕ ಕಂಪನಿ ಟೆಸ್ಲಾ ತನ್ನ ಎದುರಾಳಿಗಳಾದ ನಿಕೊಲ್​ ಕಾರ್ಪ್​ ಹಾಗೂ ಜನರಲ್​ ಮೋಟಾರ್ಸ್​ ಜತೆ ಕೈಜೋಡಿಸಿದ್ದಕ್ಕೆ ಎಲಾನ್​ ಮಸ್ಕ್​ ಒಡೆತನದ ಕಂಪನಿಯ ಷೇರುಗಳ ಮೌಲ್ಯ ಪಾತಾಳಕ್ಕೆ ಇಳಿದಿತ್ತು. ಇತ್ತ, ಅಮೆಜಾನ್​ ಜತೆ ಅಂಬಾನಿ ಕೈಜೋಡಿಸಲಿದ್ದಾರೆ ಎಂಬ ಮಾಹಿತಿ ಹೊರ ಬೀಳುತ್ತಿದ್ದಂತೆ ರಿಲಯನ್ಸ್​ ಷೇರುಗಳು ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿವೆ.

ಈಗಾಗಲೇ ಈ ನಿಟ್ಟಿನಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಒಂದು ವೇಳೆ ಈ ಡೀಲ್​ ಕುದುರಿದ್ದೇ ಆದಲ್ಲಿ, ಅಂಬಾನಿ ಭಾರತದಲ್ಲಿ ರಿಟೇಲ್​ ದೈತ್ಯ ಎನಿಸಲಿದ್ದರೆ, ಜೆಫ್​ ಬಿಜೋಸ್​ ರಿಲಯನ್ಸ್​ ಎದುರಾಳಿಯಲ್ಲ ಪಾಲುದಾರರಾಗಲಿದ್ದಾರೆ. ಭಾರತದ ಇತಿಹಾಸದಲ್ಲಿಯೇ ಅತಿ ದೊಡ್ಡ ಮೊತ್ತದ ಹೂಡಿಕೆ ಒಪ್ಪಂದ ಇದಾಗಲಿದೆ.

ಈಗಾಗಲೇ ರಿಲಯನ್ಸ್​ನ ಅಂಗಸಂಸ್ಥೆ ಜಿಯೋ ಫ್ಲಾಟ್​ಫಾರ್ಮ್ಸ್​ಗೆ ಫೇಸ್​ಬುಕ್​ ಹಾಗೂ ಗೂಗಲ್​ನಿಂದ 20 ಬಿಲಿಯನ್​ ಡಾಲರ್​ ಬಂಡವಾಳ ಪಡೆದಿದ್ದಾರೆ ಅಂಬಾನಿ. ಸಿಲ್ವರ್​ ಲೇಕ್​​ ಕಂಪನಿ ಕೂಡ ಒಂದು ಬಿಲಿಯನ್​ ಹೂಡಿಕೆ ಮಾಡಿದೆ. ಅಮೆರಿಕದ ಕೆಕೆಆರ್​ ಕೂಡ ಇಷ್ಟೇ ಮೊತ್ತದ ಹಣ ಹೂಡಲಿದೆ. ಇದೀಗ ಅಮೆಜಾನ್​ ಸರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net