

ನವದೆಹಲಿ: ಕರೊನಾ ತಡೆಗಟ್ಟಲು ಹೇರಲಾಗಿರುವ ಲಾಕ್ಡೌನ್ನಿಂದ ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿದ್ದು, ನಿತ್ಯದ ಆದಾಯವಿಲ್ಲದೇ ಊಟಕ್ಕಾಗಿ ಪರದಾಡುತ್ತಿರುವವರ ನೆರವಿಗೆ ರಿಲಯನ್ಸ್ ಫೌಂಡೇಶನ್ ಧಾವಿಸಿದೆ.
ಭಾರತದ ನಂ. 1 ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪತ್ನಿ ಹಾಗೂ ರಿಲಯನ್ಸ್ ಫೌಂಡೇಶನ್ ಚೇರ್ಪರ್ಸನ್ ನೀತಾ ಅಂಬಾನಿಯ ಅವರು ತಮ್ಮ ಫೌಂಡೇಶನ್ ವತಿಯಿಂದ ಭಾರತದ ಜನರಿಗೆ "ಮಿಷನ್ ಅನ್ನ ಸೇವಾ" ಹೆಸರಿನಲ್ಲಿ ವಿಶ್ವದ ಬಹುದೊಡ್ಡ ಕಾರ್ಪೊರೇಟ್ ಊಟ ವಿತರಣೆ ಕಾರ್ಯಕ್ರಮವನ್ನು ಘೋಷಣೆ ಮಾಡಿದ್ದಾರೆ.
ದೇಶದ ಜನರು ಕರೊನಾ ವೈರಸ್ ಲಾಕ್ಡೌನ್ನಿಂದ ಸಂಕಷ್ಟದಲ್ಲಿದ್ದು, ಕಾರ್ಯಕ್ರಮದ ಮೂಲಕ ದೇಶಾದ್ಯಂತ 3 ಕೋಟಿ ಜನರಿಗೆ ಉಚಿತ ಊಟ ವಿತರಣೆ ಮಾಡಲಿದ್ದಾರೆ. ಲಾಕ್ಡೌನ್ನಿಂದ ತೊಂದರೆಗೆ ಸಿಲುಕಿರುವ ಸಮುದಾಯಗಳು ಮತ್ತು ಕೂಲಿ ಕಾರ್ಮಿಕರಿಗೆ ಈ ಕಾರ್ಯಕ್ರಮ ನೆರವಾಗಲಿದೆ.
ಈ ಬಗ್ಗೆ ಮಾತನಾಡಿರುವ ನೀತಾ ಅವರು, ಕರೊನಾ ವೈರಸ್ ಇಡೀ ವಿಶ್ವ, ಭಾರತ ಮತ್ತು ಮಾನವೀಯತೆಗೆ ಹಿಂದೆದು ಕಂಡಿರದ ಒಂದು ಸಾಂಕ್ರಮಿಕವಾಗಿದೆ. ಇಂತಹ ಕಷ್ಟದ ಸಮಯದಲ್ಲಿ ನಮ್ಮ ಫೌಂಡೇಶನ್ ವತಿಯಿಂದ ದಿನಗೂಲಿ ನೌಕರರು, ಕೊಳಗೇರಿ ನಿವಾಸಿಗಳು, ನಗರ ಸೇವಾ ಪೂರೈಕೆದಾರರು, ಕಾರ್ಮಿಕರು ಹಾಗೂ ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳಿಗೆ ಬಹುದೊಡ್ಡ ಊಟದ ಕಾರ್ಯಕ್ರಮದಡಿಯಲ್ಲಿ ಉಚಿತ ಊಟ ವಿತರಣೆ ಮಾಡಲಾಗುವುದು ಎಂದಿದ್ದಾರೆ. (ಏಜೆನ್ಸೀಸ್)