

ನವದೆಹಲಿ : ಪಂಜಾಬ್ ಮತ್ತು ರಾಜಸ್ಥಾನದ ಕಾಂಗ್ರೆಸ್ ಸರ್ಕಾರಗಳ ಅನುಭವವನ್ನು ಆಧರಿಸಿ, ಸಾಂಕ್ರಾಮಿಕದ ಸಮಯದಲ್ಲಿ ಹೇಗೆ ಲಾಭ ಗಳಿಸಬಹುದು ಎಂಬ ಬಗ್ಗೆ ರಾಹುಲ್ ಗಾಂಧಿ ಅವರು ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ವ್ಯಂಗ್ಯವಾಡಿದ್ದಾರೆ.
ಪಂಜಾಬ್ ಸರ್ಕಾರವು ಕೇಂದ್ರ ನೀಡಿದ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ಬೆಲೆಯಲ್ಲಿ ಮಾರಿಕೊಂಡಿತು. ರಾಜಸ್ಥಾನದಲ್ಲಿ ಲಸಿಕೆಗಳನ್ನು ಕಸಕ್ಕೆ ಹಾಕಿದರು, ನಂತರ ಸಾವಿನ ಸಂಖ್ಯೆಗಳನ್ನು ಮುಚ್ಚಿಟ್ಟರು. ಈಗ ಆಕ್ಸಿಜನ್ ಕಾನ್ಸಂಟ್ರೇಟರ್ಗಳ ಖರೀದಿಯಲ್ಲಿ ಭರಪೂರವಾಗಿ ಅಕ್ರಮ ಎಸಗಿದ್ದಾರೆ ಎಂದು ಮಾಳವೀಯ ಅವರು ಟ್ವೀಟ್ ಮಾಡಿದ್ದಾರೆ.
ರಾಜಸ್ಥಾನ ಸರ್ಕಾರ ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ಖಾಸಗಿ ಕಂಪೆನಿಗಳಿಂದ ಬಹುಪಟ್ಟು ಹೆಚ್ಚು ಬೆಲೆಯಲ್ಲಿ ಖರೀದಿಸಿರುವ ಬಗೆಗಿನ ಪತ್ರಿಕಾ ವರದಿಯೊಂದನ್ನು ತಮ್ಮ ಟ್ವೀಟ್ಗೆ ಅಟ್ಯಾಚ್ ಮಾಡಿರುವ ಮಾಳವೀಯ ಅವರು, "ರಾಜಸ್ಥಾನ ಸರ್ಕಾರವು ದಲ್ಲಾಳಿಗಳ ಮೂಲಕ ಖಾಸಗಿ ಕಂಪನಿಗಳಿಂದ 20,000 ಕಾನ್ಸಂಟ್ರೇಟರ್ಗಳನ್ನು ಖರೀದಿಸಿದೆ. ಕೇವಲ 35 ರಿಂದ 40 ಸಾವಿರ ರೂಪಾಯಿ ಬೆಲೆಯ ಕಾನ್ಸಂಟ್ರೇಟರ್ಗೆ ಒಂದು ಲಕ್ಷದವರೆಗೆ ಹಣ ಕೊಟ್ಟು ಖರೀದಿಸಲಾಗಿದೆ. ಬಹುಪಾಲು ಉಪಕರಣಗಳನ್ನು ಕರೊನಾ ಪೀಕ್ ಮುಗಿದು ಒಂದು ತಿಂಗಳ ನಂತರ ಖರೀದಿಸಲಾಗಿದೆ. ಈಗ ಅವೆಲ್ಲಾ ಕಬಾಡ್ನಲ್ಲಿ ಬಿದ್ದಿವೆ" ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ, 'ಸಾಂಕ್ರಾಮಿಕದ ಸಂದರ್ಭದಲ್ಲಿ ಹೇಗೆ ಲಾಭಕೋರತನ ಮಾಡಬಹುದು' ಎಂಬುದರ ಕುರಿತು 'ಶ್ವೇತಪತ್ರ'ವನ್ನು ಬಿಡುಗಡೆ ಮಾಡಿ ಎಂದಿರುವ ಮಾಳವೀಯ, ಕಾಂಗ್ರೆಸ್ ಎಲ್ಲೆಡೆ ಭೀತಿಯನ್ನು ಸೃಷ್ಟಿಸುತ್ತಿರುವುದಕ್ಕೆ ಇದೇ ಕಾರಣವೇ ? ಎಂದು ಪ್ರಶ್ನಿಸಿದ್ದಾರೆ.