ಪಡಿತರದಾರರ ಬಾಕಿ ಹಣ ಬಿಡುಗಡೆ ಮಾಡಿ

krishnappa
ಕೃಷ್ಣಪ್ಪ
Published on

ಭದ್ರಾವತಿ: ರಾಜ್ಯದೆಲ್ಲೆಡೆ ಇರುವ ಪಡಿತರ ಗೋದಾಮುಗಳಲ್ಲಿ ಸಿಸಿ ಕ್ಯಾಮರಾ, ವಿದ್ಯುನ್ಮಾನ ತೂಕದ ಯಂತ್ರಗಳನ್ನು ಅಳವಡಿಸಬೇಕು. ಗೋದಾಮಿನೊಳಗೆ ಇತರೆ ವಾಹನಗಳ ಪ್ರವೇಶ ನಿಷೇಧಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಎಚ್ಚರಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷ ಕಳೆದಿದೆ. ಅನ್ನಭಾಗ್ಯ ಯೋಜನೆಗೆ ಹೆಚ್ಚು ಆದ್ಯತೆ ಕೊಡುತ್ತಾರೆಂದು ಸಾರ್ವಜನಿಕರು, ಪಡಿತರ ವಿತರಕರ ಸಂಘ ಭಾವಿಸಿತ್ತು. ಆದರೆ ಈವರೆಗೂ ಕೇಂದ್ರ ಸರ್ಕಾರ ಕೊಡುತ್ತಿರುವ 5 ಕೆ.ಜಿ ಅಕ್ಕಿ ಬಿಟ್ಟರೆ ರಾಜ್ಯದ ಪಾತ್ರ ಏನೂ ಇಲ್ಲ. ಬದಲಾಗಿ ಇಲಾಖೆ ಅಧಿಕಾರಿಗಳು ಪಡಿತರ ವಿತರಕರನ್ನು ಬ್ಲಾೃಕ್‌ಮೇಲ್ ಮಾಡುವ ಹಂತಕ್ಕೆ ಇಳಿದಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಪಡಿತರ ಗೋದಾಮುಗಳಲ್ಲಿ ತೂಕದಲ್ಲಿ ಮೋಸ ಆಗುತ್ತಿದೆ. ಇಲಾಖೆಯ ಕೆಳಹಂತದ ಅಧಿಕಾರಿಗಳು ಪಡಿತರ ಅಂಗಡಿ ಮಾಲೀಕರ ಮೇಲೆ ಸಲ್ಲದ ಆರೋಪಗಳನ್ನು ಹೊರಿಸಿ, ಹಣಕ್ಕೆ ಬೇಡಿಕೆ ಇಟ್ಟು ಸಂಘವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಪಡಿತರದಾರರ ಖಾತೆಗೆ ಜಮಾ ಮಾಡುತ್ತಿದ್ದ 175 ರೂ. 4 ತಿಂಗಳಿನಿಂದ ಬಂದಿಲ್ಲ. ಹಣವೂ ಇಲ್ಲ ಆಹಾರ ಪದಾರ್ಥಗಳೂ ಇಲ್ಲದಂತಾಗಿದೆ. ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಒಂದು ತಿಂಗಳೊಳಗೆ ಪರಿಹರಿಸದಿದ್ದರೆ ಎಲ್ಲೆಡೆ ಹೋರಾಟ ನಡೆಸಲಾಗುವುದು ಎಂದರು.
ರಾಜ್ಯ ಸರ್ಕಾರ ನೀಡುತ್ತಿರುವ ಡಿಪಿಟಿ ಯೋಜನೆಯನ್ನು(ನೇರ ಹಣ ಪಾವತಿ) ಕೈಬಿಟ್ಟು ಅದರ ಬದಲಾಗಿ ಆಹಾರ ಧಾನ್ಯಗಳಾದ ಅಕ್ಕಿ, ರಾಗಿ, ಗೋಧಿ, ಸಕ್ಕರೆ ವಿತರಿಸಬೇಕು. ಈ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಹಾಗೂ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಎರಡು ಬಾರಿ ಭೇಟಿ ಮಾಡಿದ್ದು, ಕಾರ್ಡುದಾರರು ಹಾಗೂ ಅಂಗಡಿ ಮಾಲೀಕರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಮನವಿ ಮಾಡಲಾಗಿದೆ. ದೇಶಾದ್ಯಂತ ಏಕರೂಪ ಕಮಿಷನ್ ಪದ್ಧತಿ ಜಾರಿ ಮಾಡಬೇಕು. 2016ರಿಂದ ಈವರೆಗೆ ಬರಬೇಕಾದ ಇ-ಕೆವೈಸಿ ಹಣವನ್ನು ಸಹ ಕೊಡಲು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು ಎಂದು ಒತ್ತಾಯಿಸಲಾಗಿದೆ ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಚನ್ನಕೇಶವ ಗೌಡ, ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ, ಪ್ರಮುಖರಾದ ಓಮಣ್ಣ, ಮುರುಗೇಶ್, ಬಸವರಾಜ್, ರುದ್ರಮುನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net