ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಬಿಡುಗಡೆ

ganesh
Published on

ಮೈಸೂರು: ಗೌರಿ ಗಣೇಶ ಹಬ್ಬ ಆಚರಣೆ ಸಂದರ್ಭದಲ್ಲಿ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.


ಪರಿಸರ ಸ್ನೇಹಿ ಜೇಡಿಮಣ್ಣಿನಿಂದ ತಯಾರಿಸಿದ ಗೌರಿ, ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿದ ನಂತರ ಮನೆಯಲ್ಲೇ ವಿಸರ್ಜಿಸಬೇಕು. ಪರಿಸರದ ಮೇಲೆ ಪರಿಣಾಮ ಬೀರುವಂತಹ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಹಾಗೂ ರಾಸಾಯನಿಕ ಬಣ್ಣಗಳನ್ನು ಒಳಗೊಂಡ ಮೂರ್ತಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ದೇವಸ್ಥಾನದೊಳಗೆ, ತಮ್ಮ ಮನೆಯೊಳಗೆ ಅಥವಾ ಸರ್ಕಾರಿ ಖಾಸಗಿ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಸಬೇಕು.


ಪಾರಂಪರಿಕ ಗೌರಿ ಗಣೇಶೋತ್ಸವಕ್ಕಾಗಿ ಸಮಿತಿಗಳು, ಮಂಡಳಿಗಳು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಪಾಲಿಕೆ ಅಥವಾ ಸ್ಥಳೀಯ ಆಡಳಿತದಿಂದ ಪೂರ್ವಾನುಮತಿ ಪಡೆಯಬೇಕು. ಮೂರ್ತಿ ಮತ್ತು ಮನೆಯಲ್ಲಿ ವಿಗ್ರಹ ಪೂಜಿಸುವವರು ಮನೆಯಲ್ಲಿಯೇ ವಿಸರ್ಜಿಸಬೇಕು. ಸರ್ಕಾರಿ ಮತ್ತು ಖಾಸಗಿ ಬಯಲು ಪ್ರದೇಶಗಳಲ್ಲಿ ಪ್ರತಿಷ್ಠಾಪಿಸುವ ಗೌರಿ ಗಣೇಶ ಮೂರ್ತಿಗಳನ್ನು ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ನಿರ್ಮಿಸಲಾಗಿರುವ ಹೊಂಡ ಅಥವಾ ಸಂಚಾರಿ ವಿಸರ್ಜನೆ ವ್ಯವಸ್ಥೆ ಅಥವಾ ಕೃತಕ ವಿಸರ್ಜನಾ ಟ್ಯಾಂಕರ್‌ಗಳಲ್ಲಿ ವಿಸರ್ಜಿಸುವಂತೆ ತಿಳಿಸಲಾಗಿದೆ.


ಹಬ್ಬದಂದು ಪಟಾಕಿ ಸಿಡಿಸುವುದನ್ನು ನಿಷೇಧಿಸಿದ್ದು, ಚರಂಡಿಯಲ್ಲಿ ಹೂವಿನ ಹಾರ, ತಟ್ಟೆ, ಲೋಟ ಎಲೆಗಳನ್ನು ಎಸೆಯಬಾರದು. ಅದಕ್ಕಾಗಿ ಕಸದ ವಾಹನಗಳನ್ನು ಬಳಸಬೇಕು. ಹಬ್ಬದ ದಿನಗಳಲ್ಲಿ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕ ಬಳಕೆ ಮಾಡಬಾರದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net