

ಸಾಗರ: ತಾಲೂಕಿನ ಎಲ್ಲ ದೇವಸ್ಥಾನಗಳ ಅಭಿವೃದ್ಧಿಗೆ 4 ಕೋಟಿ ರೂ. ಬಿಡುಗಡೆಯಾಗಿದೆ. ಮುಂದಿನ ವರ್ಷ ಮತ್ತೆ 5 ಕೋಟಿ ರೂ. ಅನುದಾನ ನೀಡಲು ಬೇಡಿಕೆ ಸಲ್ಲಿಸಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರ ಎಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ದೇವಾಲಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ ಬಳಕೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.
ದೊಡ್ಡ ದೇವಸ್ಥಾನಗಳ ಜತೆಗೆ ಸಣ್ಣ ಮಂದಿರಗಳ ಅಭಿವೃದ್ಧಿ ಸಹ ಆಗಬೇಕು ಎನ್ನುವುದು ನನ್ನ ಉದ್ದೇಶ. ಗ್ರಾಮೀಣ ಭಾಗದಲ್ಲಿ ಜನರು ಸಣ್ಣಪುಟ್ಟ ಗುಡಿಗಳನ್ನು ನಿರ್ಮಿಸಲು ಕಷ್ಟಪಡುತ್ತಿರುತ್ತಾರೆ. ಅವರಿಗೆ ತಕ್ಕಮಟ್ಟಿಗೆ ಆರ್ಥಿಕ ಸಹಕಾರ ನೀಡಲು ಸರ್ಕಾರಕ್ಕೆ ಮನವಿ ಮಾಡಿಕೊಂಡಾಗ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರು 4 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದರು.
ಕ್ಷೇತ್ರ ವ್ಯಾಪ್ತಿಯಲ್ಲಿ 2ರಿಂದ 20 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನಗಳ ಪುನರುಜ್ಜೀವನಕ್ಕಾಗಿ ಹಣ ನೀಡಲಾಗಿದೆ. ಸರ್ಕಾರ ಕೇಳುವ ಸೂಕ್ತ ದಾಖಲೆಗಳನ್ನು ದೇವಸ್ಥಾನ ಸಮಿತಿಗಳು ನೀಡಬೇಕು. ಅರ್ಜಿ ಹಾಕದಿದ್ದವರಿಗೂ ಅನುದಾನ ನೀಡಲಾಗಿದೆ. ನಿರ್ಮಿತಿ ಕೇಂದ್ರದ ನಿರ್ವಹಣೆಯಲ್ಲಿ ದೇವಸ್ಥಾನ ಅಭಿವೃದ್ಧಿ ಕೆಲಸ ನಡೆಯುತ್ತದೆ. ಸ್ಥಳೀಯರು ಕಾಮಗಾರಿಗಳ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು.
ಡಿಸಿ ಕಚೇರಿ ಮುಜರಾಯಿ ಇಲಾಖೆ ತಹಸೀಲ್ದಾರ್ ಪ್ರದೀಪ್ ಮಾತನಾಡಿ, ಅನುದಾನಕ್ಕೆ ಅರ್ಜಿ ಸಲ್ಲಿಸಿರುವ ದೇವಸ್ಥಾನಗಳ ಆಡಳಿತ ಸಮಿತಿಗಳು ಅಗತ್ಯ ದಾಖಲೆ ನೀಡಬೇಕು. ಜಿಲ್ಲೆಯ ಮುಜರಾಯಿ ದೇವಸ್ಥಾನಗಳ ಅಭಿವೃದ್ಧಿಗೂ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಚಂದ್ರಗುತ್ತಿ ದೇವಸ್ಥಾನದಲ್ಲಿ 10 ಕೋಟಿ ರೂ., ಸಾಗರದ ಗಣಪತಿ ದೇವಸ್ಥಾನದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಿರ್ವಹಿಸಲು ನೀಲಿನಕ್ಷೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಯತೀಶ್, ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ, ಮುಜರಾಯಿ ಇಲಾಖೆ ವಿವಿಧ ಅಧಿಕಾರಿಗಳು ಇದ್ದರು.